ಮಳೆಗಾಲ ಶುರುವಾದಾಗಿನಿಂದ ಅನೇಕ ರಾಜ್ಯಗಳಲ್ಲಿ ಪ್ರವಾಹದ (Mumbai Flood) ಪರಿಸ್ಥಿತಿ ನಿರ್ಮಾಣವಾಗಿದೆ. ಹೊರಗೆ ಧೋ ಎಂದು ಮಳೆ ಸುರಿಯುವಾಗ ಏನಾದರೂ ಬಿಸಿ ಬಿಸಿಯಾಗಿ ತಿನ್ನಬೇಕೆಂಬ ಆಸೆ ಹುಟ್ಟುವುದು ಸಹಜ. ಹಾಗನಿಸಿದಾಗ ಮೊಬೈಲ್ ತೆಗೆದು ಸ್ವಿಗ್ಗಿಯಲ್ಲೋ (Swiggy), ಜೊಮ್ಯಾಟೋದಲ್ಲೋ (Zomato) ನಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡುತ್ತೇವೆ. ಆದರೆ, ಅವರು ಕೂಡ ಮಳೆಯಲ್ಲಿ ಸರಿಯಾದ ಸಮಯಕ್ಕೆ ಫುಡ್ ಡೆಲಿವರಿ (Food Delivery) ಕೊಡಲು ಪರದಾಡುತ್ತಾರೆ. ಇಲ್ಲೊಬ್ಬ ಸ್ವಿಗ್ಗಿ ಡೆಲಿವರಿ ಬಾಯ್ ತನ್ನ ಗ್ರಾಹಕರಿಗೆ ಆಹಾರವನ್ನು ಡೆಲಿವರಿ ನೀಡುವ ಸಮಯದಲ್ಲಿ ಜೋರಾಗಿ ಮಳೆ ಬಂದಿದ್ದರಿಂದ ಬೈಕ್ ಬದಲು ಕುದುರೆ ಹತ್ತಿಕೊಂಡು ಹೋಗಿ ಫುಡ್ ಡೆಲಿವರಿ ನೀಡಿದ್ದಾರೆ.
ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಆ ಯುವಕನ ಬದ್ಧತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದ ಎಲ್ಲೆಡೆ ನೀರು ನಿಂತಿತ್ತು. ಇದರಿಂದ ಸ್ವಿಗ್ಗಿ ಡೆಲಿವರಿ ಬಾಯ್ ಬೈಕ್ನಲ್ಲಿ ಹೋಗಲಾರದೆ ಕುದುರೆ ಸವಾರಿ ಮಾಡಿಕೊಂಡು ಫುಡ್ ಡೆಲಿವರಿ ನೀಡಿದ್ದಾನೆ.
ಸ್ವಿಗ್ಗಿ ಡೆಲಿವರಿ ಬಾಯ್ ಮಳೆಯಲ್ಲಿ ಮುಖ್ಯ ರಸ್ತೆಯ ಉದ್ದಕ್ಕೂ ಬಿಳಿ ಕುದುರೆಯ ಮೇಲೆ ಸವಾರಿ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿರುವುದನ್ನು ಗಮನಿಸಿದರೆ ಕುದುರೆ ಸವಾರಿಯೇ ಬೆಸ್ಟ್ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಮಾರ್ಚ್‌ನಲ್ಲಿ ಒಬ್ಬ ಯುವಕ ತನ್ನ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣದಿಂದ ಮಧ್ಯರಾತ್ರಿಯಲ್ಲಿ ರಸ್ತೆಯ ಮಧ್ಯದಲ್ಲಿ ಸಿಕ್ಕಿಬಿದ್ದಿದ್ದ. ಆಗ ಫುಡ್ ಡೆಲಿವರಿ ಬಾಯ್ ತನ್ನ ಬೈಕ್‌ನಿಂದ ಪೆಟ್ರೋಲ್ ನೀಡಿ ಆತನಿಗೆ ಸಹಾಯ ಮಾಡಿದ್ದ. ಆ ವಿಡಿಯೋ ವೈರಲ್ ಆಗಿತ್ತು.