ಮೊನ್ನೆಯಷ್ಟೇ ಹಾಡಿಗೆ ತಲೆದೂಗಿದ ಯುವತಿ ಇಂದಿಲ್ಲ; ಪುಟ್ಟ ಕಂದನ ಕೂಗು, ಸಾವಿರಾರು ಜನರ ಪ್ರಾರ್ಥನೆಗೆ ದೇವರು ಸಹ ಕಿವಿಗೊಡಲಿಲ್ಲ

| Updated By: Digi Tech Desk

Updated on: May 14, 2021 | 4:31 PM

Love You Zindagi Viral Video: ಕೇವಲ ಟ್ವೀಟರ್​ನ ಒಂದು ವಿಡಿಯೋ ಮೂಲಕ ಆ ಯುವತಿಯನ್ನು ನೋಡಿದ್ದರೂ ಸಾವಿರಾರು ಜನ ಇದೀಗ ಆಕೆಗಾಗಿ, ಆಕೆಯ ಕಂದಮ್ಮನಿಗಾಗಿ ಕಂಬನಿ ಸುರಿಸಿದ್ದಾರೆ.

ಮೊನ್ನೆಯಷ್ಟೇ ಹಾಡಿಗೆ ತಲೆದೂಗಿದ ಯುವತಿ ಇಂದಿಲ್ಲ; ಪುಟ್ಟ ಕಂದನ ಕೂಗು, ಸಾವಿರಾರು ಜನರ ಪ್ರಾರ್ಥನೆಗೆ ದೇವರು ಸಹ ಕಿವಿಗೊಡಲಿಲ್ಲ
ವೈರಲ್​ ವಿಡಿಯೋದಲ್ಲಿದ್ದ ಯುವತಿ
Follow us on

ದೆಹಲಿ: ಕೊರೊನಾ ಎರಡನೇ ಅಲೆ ಎಣಿಸಿದ್ದಕ್ಕಿಂತಲೂ ಭೀಕರವಾಗಿ ವರ್ತಿಸುತ್ತಿದೆ ಎಂದು ಅರ್ಥವಾಗಲಾರಂಭಿಸಿದೆ. ಆದರೆ, ಅದು ಅರ್ಥವಾಗಲು ನೂರಾರು ಅಮಾಯಕ ಹಾಗೂ ಎಳೆ ಜೀವಗಳ ಉಸಿರು ನಿಲ್ಲಬೇಕಾಯಿತು ಎನ್ನುವುದು ದಾರುಣ ಸತ್ಯ. ಕಳೆದ ಬಾರಿ ಹಿರಿಯರಿಗೆ ಕೊರೊನಾ ಅಪಾಯಕಾರಿ ಎಂದು ಮನೆಯಲ್ಲಿದ್ದ ವೃದ್ಧರನ್ನು ಜೋಪಾನ ಮಾಡಿಕೊಳ್ಳುತ್ತಿದ್ದ ಗಟ್ಟಿ ಜೀವಗಳು ಈಗ ಎರಡನೇ ಅಲೆಯ ಸುಳಿಗೆ ಸಿಲುಕಿ ನಲುಗುತ್ತಿವೆ. ಕೆಲವು ಲೆಕ್ಕಾಚಾರಗಳ ಪ್ರಕಾರ ಯುವ ಜನತೆಯ ಮರಣ ಪ್ರಮಾಣದ ಸರಾಸರಿಯಲ್ಲಿ ಕಳೆದ ಬಾರಿಗೂ ಈ ಸಲಕ್ಕೂ ಹೆಚ್ಚು ಅಂತರವಿಲ್ಲ ಎನ್ನಲಾಗುತ್ತಿದೆಯಾದರೂ ಒಟ್ಟಾರೆಯಾಗಿ ಏರುಗತಿಯಲ್ಲಿ ಸಾಗುತ್ತಿರುವ ಸಾವಿನ ಸಂಖ್ಯೆ ಹಾಗೂ ಸಾವಿಗೆ ಕಾರಣವಾಗುತ್ತಿರುವ ಸಂಗತಿಗಳು ಎಂತಹವರನ್ನೂ ನಡುಗಿಸುತ್ತಿವೆ. ಕಳೆದ ವಾರವಷ್ಟೇ ದೆಹಲಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್​ ಸಹಾಯದೊಂದಿಗೆ ಉಸಿರಾಡುತ್ತಿದ್ದರೂ ನಗುಮುಖದಿಂದ ಹಾಡಿಗೆ ತಲೆದೂಗಿ, ಕೈ ಬೀಸುತ್ತಿದ್ದ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿತ್ತು. 30 ವರ್ಷದ ಧೈರ್ಯವಂತ ಯುವತಿಯ ಧೈರ್ಯವನ್ನು ಮೆಚ್ಚಿ ಅನೇಕರು ಆಕೆ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಆದರೆ, ವಿಧಿ ಆಕೆಯನ್ನು ಬಲಿತೆಗೆದುಕೊಂಡು ಎಲ್ಲರನ್ನೂ ದುಃಖದ ಕಡಲಿಗೆ ನೂಕಿದೆ.

ಮೇ.8ರಂದು ಈ ಯುವತಿಯ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದ ಡಾ.ಮೋನಿಕಾ, ಈ ಯುವತಿಯ ವಯಸ್ಸು ಬರೀ 30ವರ್ಷ. ಕಳೆದ 10 ದಿನಗಳಿಂದ ಆಕೆಗೆ ಐಸಿಯು ಬೆಡ್ ಸಿಗದ ಕಾರಣ ಕೊವಿಡ್ ಎಮರ್ಜೆನ್ಸಿ ವಿಭಾಗದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇವಲ ಆಕ್ಸಿಜನ್ ಸಹಾಯ ಪಡೆದಿರುವ ಈಕೆಗೆ ರೆಮ್​ಡಿಸಿವಿರ್​ ಹಾಗೂ ಪ್ಲಾಸ್ಮಾ ಚಿಕಿತ್ಸೆ ಸೇರಿದಂತೆ ಕೆಲ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಎಲ್ಲಕ್ಕೂ ಮಿಗಿಲಾಗಿ ಈಕೆ ಗಟ್ಟಿಗಿತ್ತಿ. ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು ಎನ್ನುವುದಕ್ಕೆ ಈಕೆಯೇ ಉದಾಹರಣೆ. ಈ ಹುಡುಗಿ ನನ್ನ ಬಳಿ ಯಾವುದಾದರೂ ಹಾಡು ಹಾಕಬಹುದೇ ಎಂದು ಕೇಳಿದಾಗ ನಾನದಕ್ಕೆ ಒಪ್ಪಿ ಹಾಡು ಕೇಳಿಸಿದೆ.. ಇದು ಆಕೆ ತಲೆದೂಗಿದ ಪರಿ ಎಂದು ವಿಡಿಯೋ ಕುರಿತಾಗಿ ಬರೆದುಕೊಂಡಿದ್ದರು. ಟ್ವಿಟರ್​ನಲ್ಲಿ ಹಂಚಲಾಗಿದ್ದ ಈ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೆಯಾಗುವ ಮೂಲಕ ಆಕೆಯ ಧೈರ್ಯವನ್ನು ಎಲ್ಲರೂ ಕೊಂಡಾಡಿದ್ದರು.

ನಂತರ ಮೇ 10 ರಂದು ಅದೇ ವಿಡಿಯೋವನ್ನು ರೀಟ್ವೀಟ್ ಮಾಡಿದ್ದ ಡಾ.ಮೋನಿಕಾ, ಈ ಯುವತಿಗೆ ಐಸಿಯು ಬೆಡ್ ಸಿಕ್ಕಿದೆ. ಆದರೆ, ಆಕೆಯ ಪರಿಸ್ಥಿತಿ ಹದಗೆಟ್ಟಿದೆ. ಕೆಲವೊಮ್ಮೆ ನಾನೇ ಅಸಹಾಯಕಳಾಗಿ ಬಿಡುತ್ತೇನೆ. ಈಗ ನಮ್ಮ ಕೈಯಲ್ಲಿ ಏನೂ ಉಳಿದಿಲ್ಲ, ದೇವರ ಮೇಲೆಯೇ ಭಾರ ಹಾಕಬೇಕು. ಆತನೇ ನಿರ್ಧರಿಸುತ್ತಾನೆ ಎಂದೆನ್ನಿಸುತ್ತಿದೆ. ಈಕೆಯ ಪುಟ್ಟ ಕಂದಮ್ಮ ಮನೆಯಲ್ಲಿ ಕಾಯುತ್ತಿದೆ. ದಯಮಾಡಿ ಈ ಯುವತಿ ಗುಣಮುಖವಾಗಲೆಂದು ಪ್ರಾರ್ಥಿಸಿ ಎಂದು ಸಂದೇಶ ಹಂಚಿಕೊಂಡಿದ್ದರು. ಆ ಸಂದೇಶವನ್ನು ನೋಡುತ್ತಲೇ ನಮ್ಮ ಪ್ರಾರ್ಥನೆ ಆಕೆಯೊಂದಿಗೆ ಇದೆ. ಗಟ್ಟಿಗಿತ್ತಿಗೆ ಏನೂ ಆಗುವುದಿಲ್ಲ ಎಂದು ಅನೇಕರು ಧೈರ್ಯ ತುಂಬುವ ಮೂಲಕ ಭರವಸೆಯ ಮಾತುಗಳನ್ನಾಡಿದ್ದರು.

ದುರದೃಷ್ಟವಶಾತ್ ವಿಧಿಯ ಆಟದ ಮುಂದೆ ಯಾರ ಪ್ರಾರ್ಥನೆಯೂ ಫಲಿಸಿಲ್ಲ. ಈ ಬಗ್ಗೆ ನಿನ್ನೆ (ಮೇ 13) ಮತ್ತೊಂದು ಟ್ವೀಟ್ ಮಾಡಿದ ಡಾ.ಮೋನಿಕ ಅತ್ಯಂತ ದುಃಖತಪ್ತರಾಗಿ ಯುವತಿಯ ಸಾವಿನ ವಿಚಾರವನ್ನು ಹಂಚಿಕೊಂಡಿದ್ದಾರೆ. ನಾವು ಈ ಗಟ್ಟಿಗಿತ್ತಿಯನ್ನು ಕಳೆದುಕೊಂಡುಬಿಟ್ಟೆವು. ಓಂ ಶಾಂತಿ.. ದಯವಿಟ್ಟು ಆಕೆಯ ಕುಟುಂಬಸ್ಥರಿಗಾಗಿ ಎಲ್ಲರೂ ಪ್ರಾರ್ಥಿಸಿ. ಈ ಸಾವಿನ ಭಾರ ಹೊರುವ ಶಕ್ತಿ ಆ ಪುಟ್ಟ ಕಂದಮ್ಮನಿಗೆ ಸಿಗಲಿ ಎಂದು ಬೇಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಕೇವಲ ಟ್ವೀಟರ್​ನ ಒಂದು ವಿಡಿಯೋ ಮೂಲಕ ಆ ಯುವತಿಯನ್ನು ನೋಡಿದ್ದರೂ ಸಾವಿರಾರು ಜನ ಇದೀಗ ಆಕೆಗಾಗಿ, ಆಕೆಯ ಕಂದಮ್ಮನಿಗಾಗಿ ಕಂಬನಿ ಸುರಿಸಿದ್ದಾರೆ. ಕೆಲವರಂತೂ ಇದು ನಿಜಕ್ಕೂ ಆಘಾತಕಾರಿ ಸಂಗತಿ. ಆಕೆ ಹಾಡಿಗೆ ತಲೆದೂಗಿ, ಕೈಬೀಸಿದ್ದನ್ನು ನೋಡಿದಾಗ ಕೊರೊನಾ ವೈರಸ್​ ವಿರುದ್ಧ ಆಕೆ ಜಯಿಸುವುದು ಖಚಿತ ಎಂದೇ ಭಾವಿಸಿದ್ದೆವು. ಆಕೆಯಲ್ಲಿ ಬದುಕಿನ ಬಗ್ಗೆ ಅದಮ್ಯ ವಿಶ್ವಾಸವಿತ್ತು. ಆದರೆ, ದೇವರು ನಿಷ್ಕರುಣಿಯಾಗಿಬಿಟ್ಟ ಎಂದು ಬೇಸರಿಸಿದ್ದಾರೆ. ಅಲ್ಲದೇ ಆಕೆಗಾಗಿ ಮಿಡಿದ ವೈದ್ಯರಿಗೂ ಧನ್ಯವಾದ ತಿಳಿಸಿ ನಿಮ್ಮ ಬಗ್ಗೆ ಹೆಮ್ಮೆಯಾಗುತ್ತದೆ. ಈ ಸಾವಿನ ನೋವು ತಡೆಯುವ ಶಕ್ತಿ ನಿಮಗೂ ದಕ್ಕಲಿ ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:
ಒಂದೇ ಶ್ವಾಸಕೋಶ ಹೊಂದಿದ್ದರೂ ಧೃತಿಗೆಡದೆ ಕೊರೊನಾ ವಿರುದ್ಧ ಹೋರಾಡಿದ ನರ್ಸ್​; ಹದಿನಾಲ್ಕೇ ದಿನಗಳಲ್ಲಿ ಸೋಂಕು ಮಾಯ

Published On - 3:00 pm, Fri, 14 May 21