Video: ಕಷ್ಟಪಟ್ಟು ದುಡಿದ ಹಣದಲ್ಲಿ ಸ್ಮಾರ್ಟ್ ಟಿವಿ ಖರೀದಿಸಿ ತಾಯಿಗೆ ಸರ್ಪ್ರೈಸ್ ಕೊಟ್ಟ ಡೆಲಿವರಿ ಬಾಯ್
ಮಧ್ಯಮ ವರ್ಗದ ಜನರು ಸಣ್ಣ ಆಸೆ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳಲು ಕಾಯಬೇಕಾಗುತ್ತದೆ. ಆದರೆ ಪಶ್ಚಿಮ ಬಂಗಾಳದ ಸಿಲಿಗುರಿಯ ಡೆಲಿವರಿ ಬಾಯ್ ತನ್ನ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ. ತನ್ನ ಮೂರು ತಿಂಗಳ ಸಂಬಳದ ಹಣ ಉಳಿಸಿ ತನ್ನ ತಾಯಿಗೆ ಟಿವಿ ಉಡುಗೊರೆಯಾಗಿ ನೀಡಿದ್ದಾನೆ. ಟಿವಿ ನೋಡುತ್ತಿದ್ದಂತೆ ತಾಯಿ ನೀಡಿದ ಪ್ರತಿಕ್ರಿಯೆ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಪ್ರತಿಯೊಬ್ಬ ಮಗನಿಗೂ ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬು ಇರುತ್ತದೆ. ಹೀಗಾಗಿ ಕಷ್ಟ ಪಟ್ಟು ದುಡಿಯುತ್ತಾರೆ. ಇದೀಗ ಪಶ್ಚಿಮ ಬಂಗಾಳದ ಸಿಲಿಗುರಿಯ ಡೆಲಿವರಿ ಬಾಯ್ (delivery boy) ಆಗಿ ಕೆಲಸ ಮಾಡುವ ಯುವಕನೊಬ್ಬ ತನ್ನ ದುಡಿಮೆಯ ಹಣದಲ್ಲಿ ಸ್ಮಾರ್ಟ್ ಟಿವಿ ತಂದುಕೊಟ್ಟು ತಾಯಿಯನ್ನು ಖುಷಿ ಪಡಿಸಿದ್ದಾನೆ. ಮನೆಗೆ ಸ್ಮಾರ್ಟ್ ಟಿವಿ ತಂದದ್ದನ್ನು ಕಂಡು ತಾಯಿಯ ಮುಖ ಅರಳಿದೆ. ಆ ಬಳಿಕ ಮಗನ ಸರ್ಪ್ರೈಸ್‌ಗೆ ಹೆತ್ತಮ್ಮ ಭಾವುಕರಾಗಿದ್ದು ಈ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.
ತಾಯಿಗೆ ಮಗನ ಸರ್ಪ್ರೈಸ್ ಉಡುಗೊರೆ
ಹ್ಯೂಮನ್ಸ್ ಆಫ್ ಬಾಂಬೆ ಹೆಸರಿನ (humansofbombay) ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಗೆ ಆಕೆಯ ನಗು ಟಿವಿಗಿಂತ ಹೆಚ್ಚು ಬೆಲೆಬಾಳುವಂತಿತ್ತು ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಡೆಲಿವರಿ ಬಾಯ್ ಆಗಿ ಯುವಕನು ಮನೆಗೆ ಹೊಸ ಟಿವಿ ತಂದಿರುವುದನ್ನು ಕಾಣಬಹುದು. ಸ್ವಂತ ದುಡಿಮೆಯಿಂದ ಅಮ್ಮನಿಗೆ ಏನಾದ್ರೂ ತಂದುಕೊಡಬಹುದು ಎನ್ನುವುದು ಈ ಯುವಕನ ಆಸೆಯಾಗಿತ್ತು. ಹಾಗಾಗಿ ತನ್ನ ದುಡಿಮೆ ಹಣವನ್ನು ಕೂಡಿಟ್ಟು ಟಿವಿ ತಂದಿದ್ದಾನೆ. ಹೊಸ ಸ್ಮಾರ್ಟ್ ಟಿವಿ ಮನೆಗೆ ತಂದೊಡನೆ ಈ ಯುವಕನ ತಾಯಿಯ ಮುಖ ಅರಳಿದೆ. ಟಿವಿ ಮುಂದೆ ಧಾರವಾಹಿ ನೋಡುತ್ತಾ ಕುಳಿತ ಮಹಿಳೆ ಮಗನ ಸರ್ಪ್ರೈಸ್ ಗೆ ಕಣ್ಣೀರು ಹಾಕಿದ್ದಾಳೆ. ಆ ಬಳಿಕ ತನ್ನ ಕೈಯಿಂದ ಬಾಯಿ ಮುಚ್ಚಿಕೊಂಡು ಮಗನನ್ನು ಅಪ್ಪಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ದೈಹಿಕ ನೂನ್ಯತೆಯಿದ್ರೂ ಮಾಸದ ನಗು; ಡೆಲಿವರಿ ಬಾಯ್ ಕೆಲ್ಸದಲ್ಲೇ ಖುಷಿ ಕಾಣುವ ವ್ಯಕ್ತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿಯ ನಗುವೇ ನಿಮ್ಗೆ ದೊಡ್ಡ ಉಡುಗೊರೆ ಎಂದಿದ್ದಾರೆ. ಮತ್ತೊಬ್ಬರು, ಈ ಯುವಕನ ಬಗ್ಗೆ ಹೆಮ್ಮೆ ಅನಿಸಿತು ಎಂದು ಹೇಳಿದ್ದಾರೆ. ಇನ್ನೊಬ್ಬರು ಹೆತ್ತವರ ಆಸೆ ಈಡೇರಿಸುವುದು ಮಕ್ಕಳ ಕನಸು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
