
ಬೆಂಗಳೂರು, ಜನವರಿ 6: ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ನಿರ್ಮಾಣವಾಗುತ್ತಿರುವ ಕಟ್ಟಡವಿದ್ದರೆ ಅಥವಾ ಹೊಸದಾಗಿ ಕಟ್ಟಿದ ಮನೆಯಿದ್ದರೆ ಅದರ ಮುಂದೆ ನೀವು ಈ ದೊಡ್ಡ ಕಣ್ಣುಗಳ ಮಹಿಳೆಯ ಭಯಭೀತಗೊಳಿಸುವ ಫೋಟೋವನ್ನು ಖಂಡಿತ ನೋಡಿರುತ್ತೀರಿ. ಅದರಲ್ಲೂ ನೀವು ಬೆಂಗಳೂರಿನಲ್ಲಿ (Bengaluru) ಇರುವವರಾದರೆ ಈ ಫೋಟೋ ನೋಡದೆ ಇರಲು ಸಾಧ್ಯವೇ ಇಲ್ಲ. ಸೀರೆಯುಟ್ಟ ಮಹಿಳೆ ದೊಡ್ಡ ಬಟ್ಟಲುಕಂಗಳನ್ನು ಬಿಟ್ಟುಕೊಂಡು ಹೆದರಿಸುತ್ತಿರುವ ಫೋಟೋ ಇದಾಗಿದೆ. ಈ ಫೋಟೋದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ.
ಸಾಮಾನ್ಯವಾಗಿ, ಯಾವುದಾದರೂ ಹೊಸ ಕಟ್ಟಡ ಕಟ್ಟುವಾಗ, ಅಥವಾ ಕಟ್ಟಿದ ಮನೆಯ ಗೃಹಪ್ರವೇಶಕ್ಕೂ ಮೊದಲು ಆ ಮನೆಗೆ ದೃಷ್ಟಿಯಾಗಬಾರದು ಎಂದು ವಿಕಾರವಾದ ಯಾವುದಾದರೂ ಮುಖವಾಡ ತಂದು ನೇತುಹಾಕುವುದು ವಾಡಿಕೆ. ಆದರೆ, ಆ ಮುಖವಾಡದ ಜಾಗವನ್ನು ಈಗ ಈ ಮಹಿಳೆ ಆವರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡ ಅಪಾರ್ಟ್ಮೆಂಟ್ನೊಳಗೆ ಸಿಲುಕಿದ್ದ ಸಾಕು ನಾಯಿಯ ರಕ್ಷಣೆ; ವಿಡಿಯೋ ವೈರಲ್
ಮಹಾರಾಷ್ಟ್ರದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಹಲವು ಮನೆಗಳ ಎದುರು ಈ ಮಹಿಳೆಯ ಫೋಟೋ ನೋಡಿದ್ದರು. ಯಾರೀಕೆ? ಎಂದು ತಲೆಕೆಡಿಸಿಕೊಂಡಿದ್ದರು. ಗೂಗಲ್ ಲೆನ್ಸ್ನಲ್ಲಿ ಈ ಫೋಟೋ ಹಾಕಿ ಹುಡುಕಿದರೂ ಮಾಹಿತಿ ಸಿಗಲಿಲ್ಲ ಎಂದು ಆ ಮಹಿಳೆ ಫೇಸ್ಬುಕ್ನಲ್ಲಿ ಬರೆದಿದ್ದರು. ಈ ಪೋಸ್ಟ್ ಕೂಡಲೆ ಎಲ್ಲರ ಗಮನ ಸೆಳೆಯಿತು. ಇದು 3.2 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು ಮತ್ತು ಭಾರೀ ಚರ್ಚೆಗೆ ನಾಂದಿ ಹಾಡಿತು.
ಅನೇಕ ಬಳಕೆದಾರರು ಈ ಫೋಟೋ ಹಾಕುವ ಕಾರಣವನ್ನು ವಿವರಿಸಿದ್ದಾರೆ. ಕೆಟ್ಟ ದೃಷ್ಟಿ ತಗುಲದಂತೆ ಈ ರೀತಿಯ ಫೋಟೋಗಳನ್ನು ಹಾಕಲಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಈ ರೀತಿ ಮಹಿಳೆಯ ಫೋಟೋ ಹಾಕಿದ್ದಕ್ಕೆ ಕೋಪವನ್ನೂ ಹೊರಹಾಕಿದ್ದಾರೆ. ಮೀಮ್ಗಳಿಂದ ಪ್ರಭಾವಿತರಾಗಿ ರೀಲ್ಸ್ ಮಾಡುವ ಮಹಿಳೆಯ ಫೋಟೋವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ.
ಇದನ್ನೂ ಓದಿ: Video: ಟೊಮೊಟೊ ಬಳಸಿ ಪೂರಿ ಲಟ್ಟಿಸಿದ ಯುವಕ, ವೈರಲ್ ಆಯ್ತು ದೃಶ್ಯ
ಬಾಟ್ ಪ್ರಕಾರ, ಈ ಫೋಟೋದಲ್ಲಿರುವ ಮಹಿಳೆ ಕರ್ನಾಟಕದ ಯೂಟ್ಯೂಬರ್ ನಿಹಾರಿಕಾ ರಾವ್. ಅವರ ಈ ವಿಚಿತ್ರವಾದ ಮುಖಭಾವವು 2023ರ ವೈರಲ್ ವೀಡಿಯೊ ಕ್ಲಿಪ್ನಿಂದ ಹುಟ್ಟಿಕೊಂಡಿತು. ಅದು ನಂತರ ಜನಪ್ರಿಯ ಮೀಮ್ ಆಗಿ ವೈರಲ್ ಆಗಿತ್ತು. ಕ್ರಮೇಣ ಆಕೆಯ ಆ ಫೋಟೋವನ್ನು ದೃಷ್ಟಿಗೊಂಬೆಯ ಬದಲು ಹಲವರು ತಮ್ಮ ಮನೆಯೆದುರು ಹಾಕಲಾರಂಭಿಸಿದರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ