Viral Video : ಮಗಳನ್ನು ಮದುವೆ ಮಾಡಿ ಗಂಡನಮನೆಗೆ ಕಳಿಸುವುದೆಂದರೆ ಯಾವ ಅಪ್ಪ ಅಮ್ಮನಿಗೂ ಗಂಟಲುಬ್ಬಿ ಬರುತ್ತದೆ. ಎಷ್ಟೋ ತಿಂಗಳವರೆಗೆ ಜೀವದಲ್ಲಿ ಜೀವವಿಲ್ಲದಂತೆ ಅಪ್ಪ ಅಮ್ಮ ಒದ್ಧಾಡಿ ಹೋಗುತ್ತಾರೆ. ಇತ್ತ ಹೊಸಮನೆಗೆ ಹೋದ ಮಗಳೂ ಹೆಜ್ಜೆಹೆಜ್ಜೆಗೂ ಅಪ್ಪ ಅಮ್ಮನನ್ನು ನೆನಪಿಸಿಕೊಂಡು ದುಃಖಿಸುತ್ತಿರುತ್ತಾಳೆ. ಆದರೆ ಯಾವಾಗ ಮಗಳು ಮತ್ತೆ ತಮ್ಮ ಮನೆಗೆ ಬರುತ್ತಾಳೆ ಎಂದು ಕಾಯುವುದೇ ಅಪ್ಪ ಅಮ್ಮನ ಧ್ಯಾನವಾಗಿಬಿಡುತ್ತದೆ. ಹಾಗೆಯೇ ಯಾವಾಗ ಅವರನ್ನು ನೋಡುತ್ತೇನೆ ಎನ್ನುವ ಕಾತರ ಮಗಳದಾಗುತ್ತದೆ. ಈಗಿಲ್ಲಿ ವೈರಲ್ ಆದ ವಿಡಿಯೋ ನೋಡಿ.
ರಾತ್ರಿಹೊತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಮಗಳು ತನ್ನ ಅಪ್ಪ ಅಮ್ಮನೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾಳೆ. ಆದರೆ ಅಪ್ಪ ಅಮ್ಮನಿಗೆ ಮಗಳು ತಮ್ಮ ಮನೆಗೇ ಬರುತ್ತಿದ್ದಾಳೆ ಎಂಬ ಅರಿವಿಲ್ಲ. ಮಗಳೂ ಇದನ್ನು ತಿಳಿಯಪಡಿಸಿಲ್ಲ. ಕೊನೆಗೆ ಗೇಟ್ತನಕ ಬಂದಾಗಲೂ ಅವರಿಗೆ ಅರಿವಾಗಿಲ್ಲ. ನಂತರ ಮಗಳು ಹೇಳಿದಾಗಲೇ ಅಪ್ಪ ಅಮ್ಮ ಅಚ್ಚರಿಗೆ ಒಳಗಾಗಿದ್ದಾರೆ. ಅಪ್ಪನಂತೂ ಭಾವುಕನಾಗಿ ಮಗಳನ್ನು ಎತ್ತಿಕೊಂಡು ಕುಣಿದಾಡಿದ್ಧಾರೆ.
ಹೇಗಿದೆ ಈ ವಿಡಿಯೋ? ನೆಟ್ಟಿಗರನೇಕರು ಇದನ್ನು ನೋಡಿ ತಮ್ಮ ತಮ್ಮ ಮಕ್ಕಳನ್ನು, ಪೋಷಕರನ್ನು ನೆನಪಿಸಿಕೊಂಡು ಹನಿಗಣ್ಣಾಗಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಮಿಲಿಯನ್ ಜನರು ಇದನ್ನು ನೋಡಿದ್ದಾರೆ.
ಇಂಥ ಕ್ಷಣಗಳು ಅಷ್ಟೇ ಮಧುರ ಮತ್ತು ಅಷ್ಟೇ ಭಾವುಕ ಅಲ್ಲವೆ?
Published On - 6:02 pm, Tue, 15 November 22