ಈ ಹುಡುಗಿ ಕೆಸರಿನಿಂದ ರಕ್ಷಿಸಿದ್ದಕ್ಕೆ ಸೊಂಡಿಲೆತ್ತಿ ಧನ್ಯವಾದ ಹೇಳಿದ ಮರಿಯಾನೆ
Baby Elephant : ‘ನಂದೇನೂ ತಪ್ಪಿಲ್ಲ, ಕಬ್ಬು ನೋಡಿ ಬಾಯಲ್ಲಿ ನೀರೂರಿತು. ಅದಕ್ಕೆ ಗದ್ದೆಗೆ ನುಗ್ಗಿದೆ. ನೋಡಿದರೆ ಕೆಸರಿನಲ್ಲಿ ಕಾಲು ಹೂತುಹೋಯಿತು. ಸದ್ಯ ನೀ ಬಂದು ಕಾಪಾಡಿದೆ. ಥ್ಯಾಂಕ್ ಯೂ ಅಕ್ಕಾ!’ ಇಂತಿ ಮರಿಯಾನೆ
Viral Video : ಆನೆಗಳು ಭಾರೀ ಬುದ್ಧಿವಂತ ಪ್ರಾಣಿಗಳು ಹೇಗೋ ಅಷ್ಟೇ ಆಳವಾಗಿ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವಂತಹ ಸೂಕ್ಷ್ಮ ಜೀವಿಗಳು. ವಿನಾಕಾರಣ ಅವು ಮನುಷ್ಯನ ಮೇಲೆ ದಾಳಿ ಮಾಡಲಾರವು. ಈ ವಿಷಯದಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ವರ್ತಿಸುತ್ತವೆ. ಉಳಿದಂತೆ ಮನುಷ್ಯರೊಂದಿಗೆ ಆಪ್ತವಾಗಿಯೇ ವರ್ತಿಸುತ್ತವೆ. ಇತ್ತೀಚೆಗೆ ಮರಿಆನೆಯೊಂದು ಕಬ್ಬಿನ ಗದ್ದೆಯ ಬಳಿ ಹೋಗುವಾಗ ಅಕಸ್ಮಾತ್ ಆಗಿ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದನ್ನು ನೋಡಿದ ಹುಡುಗಿಯೊಬ್ಬಳು ಅದನ್ನು ರಕ್ಷಿಸಿದ್ದಾಳೆ. ಅದಕ್ಕೆ ಪ್ರತಿಯಾಗಿ ಮರಿಯಾನೆ ಆಕೆಗೆ ಸೊಂಡಿಲೆತ್ತಿ ಧನ್ಯವಾದ ಹೇಳಿದೆ.
She helped the elephant baby to come out from the mud it was struck in. Baby acknowledges with a blessing ? pic.twitter.com/HeDmdeKLNm
— Susanta Nanda IFS (@susantananda3) October 27, 2022
ಕಬ್ಬು ಎಂದರೆ ಆನೆಗೆ ಎಲ್ಲಿಲ್ಲದ ಪ್ರೀತಿ. ಪ್ರೀತಿ ಎಂದಮೇಲೆ ಯೋಚಿಸಿ ಹೆಜ್ಜೆ ಇಡಲಾಗುತ್ತದೆಯೇ? ನೇರ ನುಗ್ಗುವುದೇ! ಹೀಗೆ ನುಗ್ಗಲು ಹೋದಾಗಲೇ ಈ ಆನೆಯ ಕಾಲುಗಳು ಗದ್ದೆಬಳಿಯ ಕೆಸರಿನಲ್ಲಿ ಹೂತುಕೊಂಡಿವೆ. ಪಾಪ ಎಷ್ಟೊತ್ತಿನಿಂದ ಹೊರಬರಲು ಒದ್ದಾಡುತ್ತಿತ್ತೋ ಏನೋ. ಅದೃಷ್ಟಕ್ಕೆ ಅಲ್ಲೊಬ್ಬ ಹುಡುಗಿ ಅದೇ ದಾರಿಯಲ್ಲಿ ಬಂದಿದ್ದಾಳೆ. ನಾಯಿ ಬೆಕ್ಕು ಆದರೆ ಯಾರಾದರೂ ಹಿಂದೂ ಮುಂದೂ ನೋಡದೆ ರಕ್ಷಿಸಿಯಾರು. ಆದರೆ ಆನೆ! ಮರಿಯೇ ಆದರೂ ಗಾತ್ರ, ತೂಕದಲ್ಲಿ ಇದು ದೊಡ್ಡದೇ ಅಲ್ಲವೆ?
ಪ್ರಾಣಿ ಪ್ರೀತಿಯೇ ಹಾಗೆ. ಅಪಾಯವನ್ನು ಲೆಕ್ಕಿಸದ್ದು. ಅಂತೆಯೇ ಈಕೆ ಮರುಗಿ ಮರಿಯಾಯನೆಯನ್ನು ರಕ್ಷಿಸಲು ಮುಂದಾಗಿದ್ದಾಳೆ. ಅಂತೂ ಸ್ವಲ್ಪ ಹೊತ್ತಿನ ನಂತರ ಆನೆ ಕೆಸರಿನಿಂದ ಯಶಸ್ವಿಯಾಗಿ ಹೊರಬಂದಿದೆ. ಬಂದದ್ದೇ ಸೊಂಡಿ ಎತ್ತಿ ಆಕೆಗೆ ಧನ್ಯವಾದ ಅರ್ಪಿಸಿದೆ. ಆನೆಗಳಲ್ಲಿ ಈ ಕೃತಜ್ಞತಾ ಭಾವ ಹೆಚ್ಚೇ ಇರುತ್ತದೆ ಅಲ್ಲವೆ?
ಈ ವಿಡಿಯೋ ಅನ್ನು ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ. ಅನೇಕರು ಈ ಮನಕರಗುವ ವಿಡಿಯೋ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ. ‘ಯಾರಿಗೇ ಆಗಲಿ ಬೇಕಾಗಿರುವುದು ಸ್ವಲ್ಪ ಪ್ರೋತ್ಸಾಹ ಮತ್ತು ಸಹಾಯ. ಇದು ಬಹಳ ಹೃದಯಸ್ಪರ್ಶಿಯಾಗಿದೆ’ ಎಂದಿದ್ದಾರೆ ಒಬ್ಬರು. ‘ಇಂಥ ಕರುಣಾಮಯಿಗಳಿಂದಲೇ ಜಗತ್ತು ಉಸಿರಾಡುತ್ತಿದೆ’ ಎಂದಿದ್ದಾರೆ ಮತ್ತೊಬ್ಬರು. ‘ಈ ಪುಟ್ಟ ಹುಡುಗಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ ಮಗದೊಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:07 pm, Fri, 28 October 22