ಜಗತ್ತಿನ ಅತೀ ಉದ್ದದ ಕಾರು (World’s Longest Car) ಎನಿಸಿಕೊಂಡಿದ್ದ ಸೂಮರ್ ಲಿಮೋಸಿನ್ (Super-Limousine) ಈಗ ಮತ್ತಷ್ಟು ಉದ್ದವಾಗಿದೆ. ಈ ಮೂಲಕ ತನ್ನದೇ ದಾಖಲೆಯನ್ನು ಮುರಿದಿದೆ. 1986 ರಲ್ಲಿ ಅಮೆರಿಕದ ಕಸ್ಟಮೈಸರ್ ಜೇ ಓರ್ಬರ್ಗ್ (Customiser Jay Ohrberg) ಎನ್ನುವಾತ ಮೊದಲು ಈ ಕಾರನ್ನು ನಿರ್ಮಿಸಿದ್ದನು. ಆರಂಭದಲ್ಲಿ 60 ಅಡಿ ಉದ್ದದ ಕಾರನ್ನು ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದನು. ಈಗ ಅದೇ ಕಾರನ್ನು 100 ಅಡಿ ಉದ್ದ ವಿಸ್ತರಿಸಿ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇದೀಗ ಗಿನ್ನೀಸ್ ರೆಕಾರ್ಡ್ನ ರಾಡಾರ್ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡು ಹಳೆಯ ದಾಖಲೆ ಮುರಿದು ಹೊಸದೊಂದು ದಾಖಲೆ ಮೂಡಿದೆ.
ಈ ಉದ್ದದ ಕಾರನ್ನು ಸುಮಾರು 10ಕ್ಕೂ ಹೆಚ್ಚು ಟಾಟಾ ನ್ಯಾನೋ ಕಾರುಗಳನ್ನು ಜೋಡಿಸಿ ನಿರ್ಮಿಸಲಾಗಿದೆ. ಈ ಮುಂಚೆ ಈ ಕಾರನ್ನು ಅಮೇರಿಕನ್ ಡ್ರೀಮ್ ಸೇರಿದಂತೆ ಹಲವು ಸಿನಿಮಾಗಳಲ್ಲೂ ತೋರಿಸಲಾಗಿತ್ತು. ಆದರೆ ಕ್ರಮೇಣ ನಿರ್ವಣೆಯ ಸಂಕಷ್ಟ ಎದುರಾದ ಹಿನ್ನಲೆಯಲ್ಲಿ ಕಾರನ್ನು ನ್ಯೂಜರ್ಸಿಯ ಗೋದಾಮೊಂದರಲ್ಲಿ ನಿಲ್ಲಿಸಿಡಲಾಗಿತ್ತು. ದಿನಕಳೆದಂತೆ ಕಾರಿನೊಳಗೆ ತುಕ್ಕು ಹಿಡಿಯಲು ಆರಂಭವಾಗಿತ್ತು, ಕಿಟಕಿಯ ಗಾಜಿನ ಬಾಗಿಲುಗಳು ಒಡೆಯಲಾರಂಭಿಸಿದ್ದವು. ಆದರೆ ನ್ಯೂಯಾರ್ಕ್‌ನ ನಸ್ಸೌ ಕೌಂಟಿಯಲ್ಲಿರುವ ಆಟೋಸಿಯಮ್ ಟೆಕ್ನಿಕಲ್ ಟೀಚಿಂಗ್ ಮ್ಯೂಸಿಯಂನ ಮಾಲೀಕ ಮೈಕೆಲ್ ಕಾರಿಗೆ ಮರುಜೀವ ನೀಡಲು ನಿರ್ಧರಿಸಿದ್ದರು.
ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ಡೆಜರ್‌ಲ್ಯಾಂಡ್ ಪಾರ್ಕ್ ಕಾರ್ ಮ್ಯೂಸಿಯಂ ಮತ್ತು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಮೈಕೆಲ್ ಅವರು 2019 ರಲ್ಲಿ ಲಿಮೋಸಿನ್ ಅನ್ನು ಖರೀದಿಸಿ ಕಾರಿನ ಲುಕ್ನ ಬದಲಾವಣೆ ಮಾಡಿದ್ದಾರೆ. ಸದ್ಯ ಈ ಕಾರಿನ ಉದ್ದ 100 ಅಡಿ 1.5 ಇಂಚು. ಈ ಕಾರಿನ ಒಳಗೆ ಹೆಲಿಪ್ಯಾಡ್, ಡೈವಿಂಗ್ ಬೋರ್ಡ್ ಸೇರಿದಂತೆ ಈಜುಕೊಳ, 75 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಬೇಕಾದಷ್ಟು ಆಸನ ವ್ಯವಸ್ಥೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
ಒಂದೇ ರೀತಿಯ ಸೀರೆಯುಟ್ಟ ಮಹಿಳೆಯರ ನಡುವೆ ಅಮ್ಮನನ್ನು ಹುಡುಕಿದ ಮಗು: ವಿಡಿಯೋ ವೈರಲ್
Published On - 4:21 pm, Fri, 11 March 22