ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ: ಚಿಕ್ಕಬಳ್ಳಾಪುರದಲ್ಲಿ 14 ಟನ್ ಗೋಧಿ ವಶಕ್ಕೆ
ಚಿಕ್ಕಬಳ್ಳಾಪುರದಲ್ಲಿ ಅನ್ನಭಾಗ್ಯ ಯೋಜನೆಗೆ ಸೇರಿದ್ದ 14 ಟನ್ ಗೋಧಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸರ್ಕಾರಿ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ತಲುಪಬೇಕಿದ್ದ ಗೋಧಿಯನ್ನು ಚಿಂತಾಮಣಿಯಿಂದ ಹೊಸಕೋಟೆಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಹೆಚ್ ಕ್ರಾಸ್ ಬಳಿ ದಾಳಿ ನಡೆಸಿ 250 ಚೀಲ ಗೋಧಿಯನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ, ಜೂನ್ 27: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ವಿತರಿಸಬೇಕಿದ್ದ 14 ಟನ್ ಗೋಧಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚಿಂತಾಮಣಿಯ ಹೆಚ್ ಕ್ರಾಸ್ ಬಳಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಚಿಂತಾಮಣಿಯಿಂದ ಹೊಸಕೋಟೆಗೆ ಕ್ಯಾಂಟರ್‌ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 250 ಚೀಲ ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಗೋಧಿಯು ಜಿಲ್ಲೆಯ ಸರ್ಕಾರಿ ವಸತಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಮೀಸಲಾಗಿತ್ತು. ಇದರಿಂದ, ವಿದ್ಯಾರ್ಥಿಗಳ ಹೊಟ್ಟೆ ತುಂಬಿಸಬೇಕಾಗಿದ್ದ ಪಡಿತರವನ್ನು ಕಾಳದಂಧೆಯಲ್ಲಿ ಸಾಗಾಟ ಮತ್ತು ಮಾರಾಟ ಮಾಡುವ ಜಾಲ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಈ ಹಿಂದೆ ಅನ್ನಭಾಗ್ಯ ಯೋಜನೆಯ ಅಕ್ಕಿ, ಸಕ್ಕರೆ ಅಥವಾ ಇಂತಹ ಇತರೆ ಸರ್ಕಾರಿ ದಾಸ್ತಾನುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದು, ಕಾಳದಂಧೆಯಲ್ಲಿ ಮಾರಾಟ ಮಾಡುವುದು, ಮತ್ತು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಪ್ರಕರಣಗಳು ಆಗಾಗ ವರದಿಯಾಗುತ್ತಿದ್ದವು. ಈ 14 ಟನ್ ಗೋಧಿಯ ಜಪ್ತಿ ಪ್ರಕರಣವು ಅಂತಹ ಅಕ್ರಮ ಚಟುವಟಿಕೆಗಳ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
