ಕಪ್ ಬೇಕಿದ್ರೆ, ಸೂರ್ಯಕುಮಾರೇ ಬರಲಿ: ಮೊಹ್ಸಿನ್ ನಖ್ವಿ ಮತ್ತೆ ಕಿರಿಕ್

Updated on: Oct 01, 2025 | 10:24 AM

Asia Cup 2025 Final India vs Pakistan: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್​ಗಳಲ್ಲಿ 146 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಜಯ ಸಾಧಿಸಿದೆ.

ಮಳೆ ನಿಂತರೂ, ಮಳೆ ಹನಿ ನಿಂತಿಲ್ಲ ಎಂಬಂತೆ ಏಷ್ಯಾಕಪ್ ಮುಗಿದರೂ ವಿವಾದ ಇನ್ನೂ ಕೂಡ ಕೊನೆಗೊಂಡಿಲ್ಲ. ಹ್ಯಾಂಡ್​ಶೇಕ್​ನಿಂದ ಶುರುವಾದ ಈ ವಿವಾದ ಇದೀಗ ಏಷ್ಯಾಕಪ್ ಟ್ರೋಫಿ ಹಸ್ತಾಂತರದ ವಿಷಯಕ್ಕೆ ಬಂದು ನಿಂತಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಭಾರತೀಯ ಆಟಗಾರರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ/ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲ್ಲ ಎಂದು ಪಟ್ಟು ಹಿಡಿದಿದ್ದರು. ಟೀಮ್ ಇಂಡಿಯಾ ಆಟಗಾರರ ಈ ನಿರ್ಧಾರದಿಂದ ಮುಖಭಂಗಕ್ಕೆ ಒಳಗಾದ ನಖ್ವಿ, ಏಷ್ಯಾಕಪ್ ಟ್ರೋಫಿ ಹಾಗೂ ವಿನ್ನರ್ ತಂಡ ಮೆಡಲ್​ಗಳನ್ನು ಹೊಟೇಲ್ ರೂಮ್​ಗೆ ಕೊಂಡೊಯ್ಯುವಂತೆ ಸೂಚಿಸಿದ್ದರು. ಹೀಗಾಗಿ ಭಾರತೀಯ ಆಟಗಾರರು ಟ್ರೋಫಿ ಇಲ್ಲದೆ ಏಷ್ಯಾಕಪ್ ಅನ್ನು ಸಂಭ್ರಮಿಸಿದ್ದರು.

ಇದೀಗ ಟೀಮ್ ಇಂಡಿಯಾಗೆ ಟ್ರೋಫಿ ಹಿಂತಿರುಗಿಸುವಂತೆ ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ ಆಗ್ರಹಿಸಿದ್ದಾರೆ. ಎಸಿಸಿ ಸಭೆಯಲ್ಲಿ ಈ ಬಗ್ಗೆ ವಾದಗಳು ನಡೆದಿದ್ದು, ನಖ್ವಿ ಅವರ ನಡೆಗೆ ಬಿಸಿಸಿಐ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಆಕ್ರೋಶದ ಬೆನ್ನಲ್ಲೇ ಟ್ರೋಫಿ ಹಸ್ತಾಂತರಿಸಲು ನಖ್ವಿ ಒಪ್ಪಿಕೊಂಡಿದ್ದಾರೆ. ಆದರೆ ಇದಕ್ಕೂ ಒಂದು ಷರತ್ತು ವಿಧಿಸಿ ಉದ್ಧಟತನ ಮೆರೆದಿದ್ದಾರೆ.

ಹೌದು, ಟೀಮ್ ಇಂಡಿಯಾಗೆ ಟ್ರೋಫಿ ಬೇಕಿದ್ದರೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬಂದು ನನ್ನ ಕೈಯಿಂದ ಸ್ವೀಕರಿಸಲು ಎಂದಿದ್ದಾರೆ. ನಖ್ವಿ ಅವರ ಈ ಬೇಡಿಕೆಗೂ ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿದ್ದು, ಇದಾಗ್ಯೂ ಎಸಿಸಿ ಮುಖ್ಯಸ್ಥ ತನ್ನ ಪಟ್ಟನ್ನು ಸಡಿಲಿಸಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಏಷ್ಯಾಕಪ್ ವಿವಾದ ಸದ್ಯಕ್ಕಂತು ಮುಗಿಯುವ ಸಾಧ್ಯತೆಯಿಲ್ಲ.

 

Loading...
Unable to load recommendations.
Follow Us
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More