ಶೆಫರ್ಡ್ ಸಿಡಿಲಬ್ಬರದ ಮುಂದೆ ಅಕೀಮ್ ಆರ್ಭಟ

Updated on: Aug 27, 2025 | 12:10 PM

Saint Lucia Kings vs Guyana Amazon Warriors: 203 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ಟಿಮ್ ಸೈಫರ್ಟ್ (37) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಕೀಮ್ ಆಗಸ್ಟೆ ಆರ್ಭಟದಿಂದ ಗಯಾನಾ ಅಮೆಝಾನ್ ವಾರಿಯರ್ಸ್ ಬೌಲರ್​ಗಳು ಕಂಗಾಲಾದರು.

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 13ನೇ ಪಂದ್ಯವು ಇಬ್ಬರು ಬ್ಯಾಟರ್​ಗಳ ಸಿಡಿಲಬ್ಬರಕ್ಕೆ ಸಾಕ್ಷಿಯಾಗಿದೆ. ಒಂದೆಡೆ ರೊಮಾರಿಯೊ ಶೆಫರ್ಡ್ ಅಬ್ಬರಿಸಿದರೆ, ಮತ್ತೊಂದೆಡೆ ಅಕೀಮ್ ಆಗಸ್ಟೆ ಆರ್ಭಟಿಸಿದ್ದಾರೆ. ಸೇಂಟ್ ಲೂಸಿಯಾದಲ್ಲಿ ಡಾರೆನ್ ಸ್ಯಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಹಾಗೂ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಮೆಝಾನ್ ಪಡೆ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಅಲ್ಲದೆ ಕೇವಲ 47 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು.

ಈ ಹಂತದಲ್ಲಿ ಕಣಕ್ಕಿಳಿದ ರೊಮಾರಿಯೊ ಶೆಫರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 34 ಎಸೆತಗಳನ್ನು ಎದುರಿಸಿದ ಶೆಫರ್ಡ್ 7 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 73 ರನ್ ಬಾರಿಸಿದರು. ಈ ವಿಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು.

203 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ಟಿಮ್ ಸೈಫರ್ಟ್ (37) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಕೀಮ್ ಆಗಸ್ಟೆ ಆರ್ಭಟದಿಂದ ಗಯಾನಾ ಅಮೆಝಾನ್ ವಾರಿಯರ್ಸ್ ಬೌಲರ್​ಗಳು ಕಂಗಾಲಾದರು.

35 ಎಸೆತಗಳನ್ನು ಎದುರಿಸಿದ ಅಕೀಮ್ ಆಗಸ್ಟೆ 4 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 73 ರನ್ ಬಾರಿಸಿದರು. ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು 18.1 ಓವರ್​ಗಳಲ್ಲಿ 203 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.