ಧಾರವಾಡದ ಅಳ್ನಾವರ ಎಪಿಎಂಸಿ ಮಾರುಕಟ್ಟೆ ಜಾಗಕ್ಕೆ ರಿಯಲ್ ಎಸ್ಟೇಟ್ ಲಾಬಿ ಸಂಚು
ಧಾರವಾಡ ಜಿಲ್ಲೆಯ ಅಳ್ನಾವರ ಎಪಿಎಂಸಿ ಮಾರುಕಟ್ಟೆ ಜಾಗವು ಬಳಕೆಯಿಲ್ಲದೆ ಬಿದ್ದಿದ್ದು, ರಿಯಲ್ ಎಸ್ಟೇಟ್ ಲಾಬಿಯ ಕಣ್ಣಿಗೆ ಬಿದ್ದಿದೆ. ಕೃಷಿಯೇತರ ಚಟುವಟಿಕೆಗಳಿಗೆ ನಿವೇಶನಗಳನ್ನು ಮಾಡಿ ಲೀಸ್‌ಗೆ ನೀಡುವ ಎಪಿಎಂಸಿ ನಿರ್ಧಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾ ಮಿಲ್ ಮಾಲೀಕರು ಅಕ್ರಮವಾಗಿ ಜಾಗ ಬಳಸುತ್ತಿದ್ದು, ಭೂ ಕಬಳಿಕೆ ಭೀತಿ ಎದುರಾಗಿದೆ.
ಧಾರವಾಡ, ಸೆ.11: ರೈತರ ಅನುಕೂಲಕ್ಕಾಗಿ ಸ್ಥಾಪಿಸಲಾದ ಕೃಷಿ ಉತ್ಪನ್ನ ಮಾರುಕಟ್ಟೆ (APMC) ಯ ಆವರಣವು ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಹಲವು ವರ್ಷಗಳಿಂದ ಖಾಲಿಯಾಗಿ ಬಿದ್ದಿದೆ. ಈ ಜಾಗದಲ್ಲಿ ಯಾವುದೇ ಕೃಷಿ ಚಟುವಟಿಕೆಗಳು ನಡೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಈ ಹಿಂದೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ತಮ್ಮ ಜಾಗ ನೀಡುವುದಿಲ್ಲ ಎಂದು ಕೃಷಿಕರ ಉಪಯೋಗವನ್ನು ಮುಂದಿಟ್ಟಿದ್ದ ಎಪಿಎಂಸಿ ಅಧಿಕಾರಿಗಳು, ಇದೀಗ ಇದೇ ಆವರಣದಲ್ಲಿ ನಿವೇಶನಗಳನ್ನು ಮಾಡಿ ವಾಣಿಜ್ಯ ಚಟುವಟಿಕೆಗಳಿಗೆ ಲೀಸ್‌ಗೆ ನೀಡಲು ಮುಂದಾಗಿದ್ದಾರೆ. ಈ ಕ್ರಮಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಿವೇಶನಗಳನ್ನು ಪಡೆದವರು ಕೃಷಿಯೇತರ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆಯಿದ್ದು, ನಂತರ ಜಾಗವನ್ನು ತಮ್ಮದೆಂದು ಹಕ್ಕು ಸಾಧಿಸಬಹುದು ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಅಲ್ಲದೆ, ಎಪಿಎಂಸಿ ಆವರಣದಲ್ಲಿ ಸಾ ಮಿಲ್ ಮಾಲೀಕರು ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಂಗ್ರಹಿಸುತ್ತಿದ್ದು, ಇದು ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಈ ವಿಷಯದಲ್ಲಿ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
