‘ಬುರ್ಖಾ ತೆಗೆ, ನಿನ್ನ ಹೆಸರೇನು ಹೇಳು’: ಬೆಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ ಕೃತ್ಯ
ಬೆಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ ನಡೆದಿದೆ. ಹಿಂದೂ ಯುವಕನ ಜತೆಗಿದ್ದ ಮುಸ್ಲಿಂ ಯುವತಿಯ ಬಳಿ ಬಂದ ಗುಂಪೊಂದು ಬುರ್ಖಾ ತೆಗೆಯುವಂತೆ ಹೇಳಿದ್ದಲ್ಲದೆ, ಬೆದರಿಕೆ ಹಾಕಿದ ಘಟನೆ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದು ಬೆಂಗಳೂರಿನ ಯಾವ ಪ್ರದೇಶದಲ್ಲಿ ನಡೆದ ಘಟನೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಪಾರ್ಕ್ವೊಂದರಲ್ಲಿ ನೈತಿಕ ಪೊಲೀಸ್ಗಿರಿ ನಡೆಸಿದ ಐವರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಇದೀಗ ಅದನ್ನೇ ಹೋಲುವ ಮತ್ತೊಂದು ಪ್ರಕರಣ ವರದಿಯಾಗಿದೆ. ಪಾರ್ಕೊಂದರಲ್ಲಿ ಮುಸ್ಲಿಂ ಯುವತಿ, ಹಿಂದೂ ಯುವಕ ಕುಳಿತಿದ್ದಾಗ ಅವರ ಬಳಿಗೆ ಬಂದ ಯುವಕರ ತಂಡವೊಂದು, ‘ಬುರ್ಖಾ ತೆಗೆ, ನಿನ್ನ ಹೆಸರೇನು ಹೇಳು’ ಎನ್ನುತ್ತ ವಿಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದೆ. ದಯವಿಟ್ಟು ಗಲಾಟೆ ಮಾಡಬೇಡಿ ಎಂದು ಯುವತಿ ಬೇಡಿಕೊಂಡಿದ್ದರೂ ಬಿಡದೆ, ‘ಕಮಿಟಿಯವರು ಬರ್ತಾರೆ ಇರು’ ಎಂದು ಹೇಳಿ ವಿಡಿಯೋ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸದ್ಯ ನೈತಿಕ ಪೊಲೀಸ್ಗಿರಿಯ ವಿಡಿಯೋವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ದೊರೆಯಬೇಕಿದೆ. ಸದ್ಯ, ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Published on: Apr 15, 2025 12:02 PM