ಪಿಎಸ್‌ಐ ಪ್ರಕರಣ: ನನ್ನ ಗಂಡ ರಾಡ್‌ನಿಂದ ಹೊಡೆದು, ದಿಂಬಿನಿಂದ ಉಸಿರುಗಟ್ಟಿಸಿ ಹಿಂಸೆ ನೀಡುತ್ತಿದ್ದ
ವಿಜಯಪುರ ಪಿಎಸ್‌ಐ ಪ್ರಕರಣದಲ್ಲಿ ತನ್ನ ವಿರುದ್ಧ ಕೇಳಿಬಂದ ಆರೋಪಗಳನ್ನು ಅನುರಾಧಾ ನಿರಾಕರಿಸಿದ್ದಾರೆ. ಪತಿ ಭೀಮಶಂಕರ್ ಅವರ ದೌರ್ಜನ್ಯದಿಂದಾಗಿ ತಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದಿದ್ದೆ ಎಂದು ಅವರು ವಿವರಿಸಿದ್ದಾರೆ. ಅಂಚೆಪಾಳ್ಯದಲ್ಲಿ ಮಕ್ಕಳೊಂದಿಗೆ ವಾಸವಿರುವ ಅನುರಾಧಾ, ಗಂಡನ ಕಿರುಕುಳವೇ ಪೊಲೀಸ್ ಠಾಣೆಗೆ ಹೋಗಲು ಕಾರಣವಾಯಿತು ಎಂದು ತಿಳಿಸಿದ್ದಾರೆ.
ವಿಜಯಪುರ, ಡಿ.30: ವಿಜಯಪುರ ಪಿಎಸ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಪತಿ ಭೀಮಶಂಕರ್ ಮತ್ತು ಅತ್ತೆ ಶಾರದಾಬಾಯಿ ಮಾಡಿದ ಆರೋಪಗಳನ್ನು ಅನುರಾಧಾ ಹೋಳಕರ್ ನಿರಾಕರಿಸಿದ್ದಾರೆ. ತಾನು ಪಿಎಸ್‌ಐ ಮನೋಹರ್ ಕಂಚಗಾರ ಅವರೊಂದಿಗೆ ಓಡಿ ಹೋಗಿಲ್ಲ ಎಂದು ಸ್ಪಷ್ಟಪಡಿಸಿರುವ ಅನುರಾಧಾ, ಅಂಚೆಪಾಳ್ಯದಲ್ಲಿ ತನ್ನ ಮಗಳೊಂದಿಗೆ ವಾಸವಾಗಿರುವುದಾಗಿ ತಿಳಿಸಿದ್ದಾರೆ. ತನ್ನ ಪತಿ ಭೀಮಶಂಕರ್ ಐದು ವರ್ಷಗಳ ಕಾಲ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅನುರಾಧಾ ಆರೋಪಿಸಿದ್ದಾರೆ. ರಾಡ್‌ನಿಂದ ಹೊಡೆಯುವುದು, ದಿಂಬಿನಿಂದ ಉಸಿರುಗಟ್ಟಿಸಲು ಯತ್ನಿಸುವುದು ಮತ್ತು ಕುತ್ತಿಗೆಗೆ ಉರುಳು ಹಾಕಿದಂತಹ ಘಟನೆಗಳು ನಡೆದಿವೆ ಎಂದು ಹೇಳಿದ್ದಾರೆ. ಕುಟುಂಬದಲ್ಲಿ ಗಂಡುಮಕ್ಕಳ ಬೆಂಬಲವಿಲ್ಲದ ಕಾರಣ ಹಾಗೂ ತಾಯಿಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಈ ದೌರ್ಜನ್ಯವನ್ನು ಐದು ವರ್ಷಗಳ ಕಾಲ ಸಹಿಸಿಕೊಂಡಿದ್ದಾಗಿ ಅನುರಾಧಾ ತಿಳಿಸಿದ್ದಾರೆ. ಗಂಡನ ಮದ್ಯಪಾನ ಮತ್ತು ನಿರಂತರ ಕಿರುಕುಳದಿಂದಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಯಿತು ಎಂದು ಅವರು ವಿವರಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

