ಆಪರೇಷನ್ ಸಿಂಧೂರ್ ವೇಳೆ ಸೈನಿಕರಿಗೆ ನೀರು, ಟೀ, ಲಸ್ಸಿ ನೀಡಿದ್ದ 10 ವರ್ಷದ ಬಾಲಕನಿಗೆ ವಿಶೇಷ ಪುರಸ್ಕಾರ
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಸೈನಿಕರಿಗೆ ಸಹಾಯ ಮಾಡಿದ್ದ 10 ವರ್ಷದ ಶ್ರವಣ್ ಸಿಂಗ್ ಗೆ ಧೈರ್ಯ ಮತ್ತು ದೇಶಭಕ್ತಿಗಾಗಿ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ನೀಡಲಾಗಿದೆ. ಭಾರತೀಯ ಸೇನೆಯ ಅತ್ಯಂತ ಕಿರಿಯ ನಾಗರಿಕ ಯೋಧ ಎಂದು ಗುರುತಿಸಲ್ಪಟ್ಟ 10 ವರ್ಷದ ಶ್ರವಣ್ ಸಿಂಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಸಾಧಾರಣ ಧೈರ್ಯ, ಕರುಣೆ ಮತ್ತು ದೇಶಭಕ್ತಿಗಾಗಿ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ನೀಡಿ ಗೌರವಿಸಿದ್ದಾರೆ.
ನವದೆಹಲಿ, ಡಿಸೆಂಬರ್ 26: ಪಂಜಾಬ್ನ ಫಿರೋಜ್‌ಪುರದ ಚಕ್ ತರಣ್ ವಾಲಿ ಗ್ರಾಮದ 10 ವರ್ಷದ ಶ್ರವಣ್ ಸಿಂಗ್ (Shravan Singh) ಆಪರೇಷನ್ ಸಿಂಧೂರ್ ಸಮಯದಲ್ಲಿ ಹೆಚ್ಚಿನ ಅಪಾಯದ ಗಡಿ ಪೋಸ್ಟ್‌ಗಳಲ್ಲಿ ಸೇವಾ ನಿರತರಾಗಿದ್ದ ಸೈನಿಕರಿಗೆ ಚಹಾ, ಲಸ್ಸಿ, ನೀರು ನೀಡುವ ಮೂಲಕ ಅವರ ದಾಹ ನೀಗಿಸುತ್ತಿದ್ದ. ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿ ದಾಳಿ ನಡೆಯುತ್ತಿದ್ದುದರಿಂದ ಅದು ಅಪಾಯದ ಸ್ಥಳವಾಗಿದ್ದರೂ ಶ್ರವಣ್ ನಿಸ್ವಾರ್ಥವಾಗಿ ಭಾರತೀಯ ಸೇನಾ ಸಿಬ್ಬಂದಿಗೆ ನೀರು, ಹಾಲು ಮತ್ತು ಚಹಾವನ್ನು ನೀಡುತ್ತಿದ್ದ. ಆ ಸಮಯದಲ್ಲಿ ದೊಡ್ಡವರು ಕೂಡ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಹೀಗಾಗಿ, ಆ ಬಾಲಕನ ಧೈರ್ಯ ಮತ್ತು ದೇಶಭಕ್ತಿಯನ್ನು ಮೆಚ್ಚಿ ಆತನಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ನೀಡಲಾಗಿದೆ.
10 ವರ್ಷದ ಶ್ರವಣ್ ಸಿಂಗ್ ಪಂಜಾಬ್ನ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾದ ಭಾರತದ ಸೇನಾ ಸಿಬ್ಬಂದಿಗೆ ನೀರು, ಚಹಾ, ಹಾಲು, ಲಸ್ಸಿ ಮತ್ತು ಐಸ್ ಒದಗಿಸಿ ತಮ್ಮ ದೇಶಭಕ್ತಿ ಪ್ರದರ್ಶಿಸಿದ್ದ. ಅಂತಹ ಅಪಾಯಕಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈನಿಕರಿಗೆ ಆ ಹುಡುಗ ಸಹಾಯ ಮಾಡಿದ್ದ. ಅಷ್ಟೇ ಅಲ್ಲದೆ, ಆ ಸೈನಿಕರಿಗೆ ಉಳಿದುಕೊಳ್ಳಲು ತನ್ನ ಮನೆಯಲ್ಲಿ ಜಾಗ ನೀಡಲು ಆತ ತನ್ನ ಅಪ್ಪನನ್ನು ಒಪ್ಪಿಸಿದ್ದ. ಹೀಗಾಗಿ, ಸೇನೆಯಿಂದ ಆ ಬಾಲಕನಿಗೆ ವಿಶೇಷ ಉಡುಗೊರೆಗಳನ್ನು ಸಹ ನೀಡಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ