ಆದಾಯದ ಕನಿಷ್ಟ ಶೇಕಡಾ 25 ಭಾಗ ಹೂಡಿಕೆಗೆ ಮೀಸಲಿಡಬೇಕು: ಡಾ ಬಾಲಾಜಿ ರಾವ್, ಹೂಡಿಕೆ ತಜ್ಞ

| Updated By: shruti hegde

Updated on: Nov 18, 2021 | 8:06 AM

ವಿಮಾ ಪಾಲಿಸಿಗಳಲ್ಲಿ ನೂರೆಂಟು ಬಗೆಗಳಿವೆ ಆದರೆ ಅವೆಲ್ಲವೂ ವ್ಯರ್ಥ ಮತ್ತು ವಿಮಾ ಕಂಪನಿಗಳಿಗೆ ಮಾತ್ರ ಅದರಿಂದ ಲಾಭವಾಗುತ್ತದೆ. ವಿಮೆಯಲ್ಲಿ ಹಣ ಹೂಡಲು ಕೇವಲ ಟರ್ಮ್ ಇನ್ಶೂರೆನ್ಸ್ ಮಾತ್ರ ಉತ್ತಮ ಎಂದು ರಾವ್ ಹೇಳುತ್ತಾರೆ,

ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಅವರು ಈ ಸಂಚಿಕೆಯಲ್ಲಿ ಆದಾಯವನ್ನು ಹೇಗೆ ವಿಂಗಡನೆ ಮಾಡಬೇಕು, ಉಳಿತಾಯದ ಬಾಬತ್ತಿಗೆ ಎಷ್ಟು ಹಣ ಮೀಸಲಿಡಬೇಕು ಅನ್ನೋದನ್ನು ವಿವರಿಸಿದ್ದಾರೆ. ನಾವು ಮಾಡುವ ಖರ್ಚುಗಳಲ್ಲಿ ಮತ್ತು ಹೂಡಿಕೆಗಳಲ್ಲಿ ಅತಿ ಮುಖ್ಯವಾಗಿ ಶಿಸ್ತು ಇರಬೇಕು. ಆದಾಯ ಎಷ್ಟಾದರೂ ಇರಲಿ ಅದರಲ್ಲಿ ಶೇಕಡಾ 20 ರಿಂದ 30 ರಷ್ಟು ಹಣವನ್ನು ಹೂಡಿಕೆ ಮೀಸಲಿಡಬೇಕು. ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆಗಾಗಿ ಹಣ ಕೂಡಿಡುವುದು ಹೂಡಿಕೆ ಅನಿಸಿಕೊಳ್ಳಲಾರದು. ನಾವು ಹೂಡಿಕೆ ಮಾಡುವುದು ರಿಟೈರ್ ಆದ ಮೇಲೆ ಜೀವನ ನಡೆಸುವುದಕ್ಕೆ ಎಂದು ಡಾ ರಾವ್ ಹೇಳುತ್ತಾರೆ. ನಮ್ಮ ಮುಪ್ಪಿನ ಪ್ರಾಯದಲ್ಲಿ ಬೇರೆಯವರ ಹಂಗಿನಲ್ಲಿ ಬದುಕುವ ಸ್ಥಿತಿ ಎದುರಾಗಬಾರದು ಅಂತಾದರೆ ನಮ್ಮ ಆದಾಯದ ಕಾಲು ಭಾಗವನ್ನು ಹೂಡಿಕೆ ಮಾಡಲೇಬೇಕು ಅಂತ ಅವರು ಹೇಳುತ್ತಾರೆ.

ನಮ್ಮ ಆದಾಯ ಯಾವ್ಯಾವ ಬಾಬತ್ತುಗಳಿಗೆ ಖರ್ಚಾಗುತ್ತದೆ ಅಂತ ಡಾ ರಾವ್ ವಿವರಣೆ ನೀಡುತ್ತಾರೆ. ಬಾಡಿಗೆ ಮನೆಯಲ್ಲಿ ವಾಸ ಮಾಡುವರಾದರೆ ಅದಾಯದ ಶೇಕಡಾ 15ರಷ್ಟು ಬಾಡಿಗೆಗೆ ಹೋಗುತ್ತದೆ. ಸ್ವಂತ ಮನೆ ಇರುವವರು ಹೋಮ್ ಲೋನ್ ಮೇಲಿನ ಕಂತು, ಕಾರಿನ ಕಂತುಗಳಿಗೆ ಹಣ ಕಟ್ಟಬೇಕಾಗುತ್ತದೆ. ನಮ್ಮ ದೇಶದಲ್ಲಿ ಶೇಕಡಾ 92 ರಷ್ಟು ಜನ ವಾಹನಗಳನ್ನು ಬ್ಯಾಂಕ್ ಲೋನ್ ಎತ್ತಿ ಕೊಂಡಿರುತ್ತಾರೆ. ಮನೆ ಕಟ್ಟಲೂ ಸಹ ಅಷ್ಟೇ ಶೇಕಡಾವಾರು ಜನ ಸಾಲ ಮಾಡಿರುತ್ತಾರೆ.

ಅದೆಲ್ಲ ಸರಿ, ಈ ಸಾಲಗಳು ತೀರುವ ಮೊದಲೇ, ಮತ್ತೊಂದು ಕಾರು ಇಲ್ಲವೇ ಸೈಟ್ ಅಥವಾ ಮನೆ ಕೊಳ್ಳಲು ಸಾಲ ಮಾಡುವುದು ಆಶಿಸ್ತಿನ ಪರಮಾವಧಿ ಎಂದು ಡಾ ರಾವ್ ಹೇಳುತ್ತಾರೆ. ಅಕ್ಷಯ ತೃತೀಯ ದಿನದಂದು ಸಾಲ ಮಾಡಿ ಚಿನ್ನ ಕೊಳ್ಳವುದು ಕೂಡ ಮೂರ್ಖತನ ಎಂದು ಅವರು ಹೇಳುತ್ತಾರೆ. ಹಾಗೆಯೇ, ನಮ್ಮ ಆದಾಯದ ಶೇಕಡಾ 40 ರಷ್ಟು ಭಾಗ ಊಟ ಬಟ್ಟೆಗೆ ಹೋಗುತ್ತದೆ ಎಂದು ರಾವ್ ತಿಳಿಸುತ್ತಾರೆ.

ವಿಮಾ ಪಾಲಿಸಿಗಳಲ್ಲಿ ನೂರೆಂಟು ಬಗೆಗಳಿವೆ ಆದರೆ ಅವೆಲ್ಲವೂ ವ್ಯರ್ಥ ಮತ್ತು ವಿಮಾ ಕಂಪನಿಗಳಿಗೆ ಮಾತ್ರ ಅದರಿಂದ ಲಾಭವಾಗುತ್ತದೆ. ವಿಮೆಯಲ್ಲಿ ಹಣ ಹೂಡಲು ಕೇವಲ ಟರ್ಮ್ ಇನ್ಶೂರೆನ್ಸ್ ಮಾತ್ರ ಉತ್ತಮ ಅದನ್ನು ಬಿಟ್ಟರೆ ಆರೋಗ್ಯ ವಿಮೆ ಮಾಡಿಸುವುದು ಒಳ್ಳೆಯದು ಅಂತ ಡಾ ಬಾಲಾಜಿ ರಾವ್ ಹೇಳುತ್ತಾರೆ.

ಹಾಗಾಗೇ, ಮನೆಯಲ್ಲಿ ಗಂಡ-ಹೆಂಡತಿ ಒಟ್ಟಿಗೆ ಕೂತು ತಮ್ಮ ಆದಾಯವನ್ನು ಹೇಗೆ ಮತ್ತು ಯಾವ್ಯಾವುದಕ್ಕೆ ಖರ್ಚು ಮಾಡಬೇಕು ಒಂದು ಪೇಪರ್ನಲ್ಲಿ ಬರೆಯಬೇಕು. ಎಲ್ಲ ಖರ್ಚುಗಳು ಕಳೆದು ಹೂಡಿಕೆಗೆ ಆದಾಯದ ಕನಿಷ್ಟ ಶೇಕಡ 25 ರಷ್ಟು ಉಳಿಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಡಾ ಬಾಲಾಜಿ ರಾವ್ ಹೇಳುತ್ತಾರೆ.

ಇದನ್ನೂಓದಿ: ಖ್ಯಾತ ನಟನಿಗೆ ಇದೆಂಥಾ ಗತಿ? ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ನೋಡಿ ಕಣ್ಣೀರಿಟ್ಟ ಫ್ಯಾನ್ಸ್​​​