BBL: ಕೇವಲ 14.28 ರ ಸ್ಟ್ರೈಕ್ ರೇಟ್; ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ

Updated on: Jan 18, 2026 | 6:34 PM

Babar Azam BBL 2026: ಬಿಗ್ ಬ್ಯಾಷ್ ಲೀಗ್ 2026 ರ 40ನೇ ಪಂದ್ಯದಲ್ಲಿ, ಸಿಡ್ನಿ ಸಿಕ್ಸರ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನಿ ಸೂಪರ್‌ಸ್ಟಾರ್ ಬಾಬರ್ ಆಝಂ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದರು. 7 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿದ ಅವರು ತಂಡದ ಮೇಲೆ ಒತ್ತಡ ಹೇರಿದರು. ಈ ಆವೃತ್ತಿಯ ಉದ್ದಕ್ಕೂ ಅವರ ಸ್ಟ್ರೈಕ್ ರೇಟ್ ಕಳಪೆಯಾಗಿದೆ.

ಬಿಗ್ ಬ್ಯಾಷ್ ಲೀಗ್ 2026 ರ 40 ನೇ ಪಂದ್ಯ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ಬ್ರಿಸ್ಬೇನ್ ಹೀಟ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ನಡೆಯಿತು. ಈ ಪಂದ್ಯವು ಸಿಡ್ನಿ ಸಿಕ್ಸರ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲೂ ಪಾಕಿಸ್ತಾನಿ ಸೂಪರ್‌ಸ್ಟಾರ್ ಬಾಬರ್ ಆಝಂ ಅವರ ಬ್ಯಾಟಿಂಗ್ ಮತ್ತೊಮ್ಮೆ ಎಲ್ಲರನ್ನೂ ನಿರಾಶೆಗೊಳಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 171 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಡ್ನಿ ಸಿಕ್ಸರ್ಸ್‌ ತಂಡಕ್ಕೆ ಸ್ಫೋಟಕ ಆರಂಭದ ಅಗತ್ಯವಿತ್ತು. ಆದಾಗ್ಯೂ, ಬಾಬರ್ ಅವರ ಇನ್ನಿಂಗ್ಸ್ ತನ್ನದೇ ತಂಡದ ಮೇಲೆ ಒತ್ತಡ ಹೇರಿತು.

172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಆರಂಭಿಕ ಆಟಗಾರ ಬಾಬರ್ ಆಝಂ 7 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು. 14.28 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಬಾಬರ್​ಗೆ ಬೌಂಡರಿ ಅಥವಾ ಸಿಕ್ಸರ್ ಬಾರಿಸಲು ಸಾಧ್ಯವಾಗಲಿಲ್ಲ. ಈ ನಿಧಾನಗತಿಯ ಆರಂಭದ ನಂತರ, ಅವರನ್ನು ಕ್ಸೇವಿಯರ್ ಬಾರ್ಟ್ಲೆಟ್ ಪೆವಿಲಿಯನ್​ಗಟ್ಟಿದರು.

ಬಾಬರ್ ಔಟಾದಾಗ ತಂಡದ ಸ್ಕೋರ್ 2 ಓವರ್‌ಗಳಲ್ಲಿ 21 ರನ್ ಆಗಿತ್ತು. ಬಾಬರ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ಸ್ಟೀವ್ ಸ್ಮಿತ್ ತ್ವರಿತ ಆರಂಭ ನೀಡುವಲ್ಲಿ ಯಶಸ್ವಿಯಾದರು, ಆದರೆ ಬಾಬರ್ ಪ್ರತಿ ರನ್ ಗಳಿಸಲು ಹೆಣಗಾಡಿದರು. ಬಾಬರ್ ಈ ರೀತಿಯ ಕಳಪೆ ಪ್ರದರ್ಶನ ನೀಡುತ್ತಿರುವುದು ಬಿಗ್ ಬ್ಯಾಷ್ ಲೀಗ್‌ನಲ್ಲಿ ಇದು ಮೊದಲ ಬಾರಿಯಲ್ಲ. ಈ ಆವೃತ್ತಿಯ ಉದ್ದಕ್ಕೂ ಅವರ ಸ್ಟ್ರೈಕ್ ರೇಟ್ ಪ್ರಶ್ನಾರ್ಹವಾಗಿದೆ. ಆಡಿರುವ 11 ಪಂದ್ಯಗಳಲ್ಲಿ ಕೇವಲ 203 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ, ಸ್ಟ್ರೈಕ್ ರೇಟ್ 100 ರ ಆಸುಪಾಸಿನಲ್ಲಿದೆ.