ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ: ಶಾಲಾ ಆವರಣದಲ್ಲಿ ಪಾರ್ಥಿವ ಶರೀರಕ್ಕೆ ಪುಷ್ಪವೃಷ್ಠಿ

Edited By:

Updated on: Sep 26, 2026 | 4:04 PM

ಬಾಗಲಕೋಟೆಯ ನೀಲಾನಗರ ತಾಂಡಾದ ಪ್ರೀತಿಯ ಮುಖ್ಯ ಶಿಕ್ಷಕ ಬಸವರಾಜ ರಾಮಪ್ಪ ಶೆಟ್ಟಿ ರಸ್ತೆ ಅಪಘಾತದಲ್ಲಿ ಗಾಯಗೊಂಡು, 14 ದಿನಗಳ ಚಿಕಿತ್ಸೆ ಬಳಿಕ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು ಅಂಬುಲೆನ್ಸ್‌ನ ಮೇಲೆ ಹೂಮಳೆಗರೆದು, ಕಣ್ಣೀರ ವಿದಾಯ ಹೇಳಿದರು. ಈ ಭಾವುಕ ಘಟನೆ ಇಡೀ ಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಮಕ್ಕಳು ತಮ್ಮ ಮೆಚ್ಚಿನ ಗುರುವಿಗೆ ಸಲ್ಲಿಸಿದ ಗೌರವ ಹೃದಯಸ್ಪರ್ಶಿಯಾಗಿದೆ.

ಬಾಗಲಕೋಟೆ, ಸೆ.26: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆಚ್ಚಿನ ಶಿಕ್ಷಕ ಬಸವರಾಜ ರಾಮಪ್ಪ ಶೆಟ್ಟಿ (53) ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ತಮ್ಮ ಪ್ರೀತಿಯ ಶಿಕ್ಷಕನ ಅಂತಿಮ ದರ್ಶನದ ವೇಳೆ ಶಾಲಾ ಮಕ್ಕಳು ಪಾರ್ಥಿವ ಶರೀರದ ಮೇಲೆ ಹೂಮಳೆ ಗೈದು ಭಾವುಕ ವಿದಾಯ ಹೇಳಿದ ಘಟನೆ ಬಾಗಲಕೋಟೆ ತಾಲೂಕಿನ ನೀಲಾನಗರ ತಾಂಡಾದಲ್ಲಿ ನಡೆದಿದೆ. ಮೃತ ಬಸವರಾಜ ರಾಮಪ್ಪ ಶೆಟ್ಟಿ ಅವರು ನೀಲಾನಗರ ತಾಂಡಾದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಬಾಗಲಕೋಟೆ ತಾಲೂಕಿನ ಶಿರೂರ ಬಳಿ ಸುಮಾರು ಎರಡು ವಾರಗಳ ಹಿಂದೆ ಬಸವರಾಜ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹಿಂಬದಿಯಿಂದ ಬಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕಳೆದ 14 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಬೆಳಗಾವಿಯಿಂದ ಶಿಕ್ಷಕ ಬಸವರಾಜ ಅವರ ಪಾರ್ಥಿವ ಶರೀರವನ್ನು ಹೊತ್ತ ಅಂಬುಲೆನ್ಸ್ ನೀಲಾನಗರ ತಾಂಡಾಕ್ಕೆ ಆಗಮಿಸುತ್ತಿದ್ದಂತೆ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ತಮ್ಮ ನೆಚ್ಚಿನ ಮುಖ್ಯ ಗುರುಗಳನ್ನು ಕಳೆದುಕೊಂಡ ಶಾಲಾ ಮಕ್ಕಳು ಶಾಲೆಯ ಆವರಣದ ಇಕ್ಕೆಲಗಳಲ್ಲಿ ಸಾಲಾಗಿ ನಿಂತು, ಪಾರ್ಥಿವ ಶರೀರ ಹೊತ್ತು ಸಾಗುತ್ತಿದ್ದ ಅಂಬುಲೆನ್ಸ್‌ಗೆ ಭಾವಪೂರ್ಣವಾಗಿ ಹೂಮಳೆ (ಪುಷ್ಪಾರ್ಚನೆ) ಗರೆದು ಕಣ್ಣೀರಿನ ಗೌರವ ಸಲ್ಲಿಸಿದರು. ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ಅಂತಿಮ ನಮನ ಸಲ್ಲಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More