ಬಳ್ಳಾರಿ ಜಿಎಸ್‌ಟಿ ವಂಚನೆ: ಅಮಾಯಕ ರೋಷನ್ ಹೆಸರಲ್ಲಿ 350 ಕೋಟಿ ರೂ. ವ್ಯವಹಾರ, ಬೆಳಕಿಗೆ ಬಂದಿದ್ದು ಹೇಗೆ?
ಬಳ್ಳಾರಿಯಲ್ಲಿ ಸೇವಾ ಸಲಹೆಗಾರ ರೋಷನ್ ಹೆಸರಿನಲ್ಲಿ 350 ಕೋಟಿ ರೂ.ಗೂ ಹೆಚ್ಚು ಜಿಎಸ್‌ಟಿ ವಂಚನೆ ನಡೆದಿದೆ. ತಿಂಗಳಿಗೆ ₹15 ಸಾವಿರ ವೇತನ ಪಡೆಯುವ ಇವರ ಕುಟುಂಬ ಆರ್ಥಿಕವಾಗಿ ದುರ್ಬಲವಾಗಿದೆ. ತಮ್ಮ ಆಧಾರ್ ಕಾರ್ಡ್ ಬಳಸಿ ಜಿಎಸ್‌ಟಿ ಖಾತೆ ತೆರೆದು ಅಕ್ರಮ ವ್ಯವಹಾರ ನಡೆಸಲಾಗಿದೆ ಎಂದು ರೋಷನ್ ತಿಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದು, ರೋಷನ್ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಬಳ್ಳಾರಿ, ನವೆಂಬರ್ 14: ಬಳ್ಳಾರಿಯಲ್ಲಿ ಬೃಹತ್ ಜಿಎಸ್‌ಟಿ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ತಿಂಗಳಿಗೆ ಕೇವಲ 15 ಸಾವಿರ ರೂ. ಗಳಿಸುವ ರೋಷನ್ ಎಂಬ ಸಾಮಾನ್ಯ ವ್ಯಕ್ತಿಯ ಹೆಸರಿನಲ್ಲಿ 350 ಕೋಟಿ ರೂ.ಗೂ ಹೆಚ್ಚು ಜಿಎಸ್‌ಟಿ ವ್ಯವಹಾರ ನಡೆಸಲಾಗಿದೆ. ಟೊಯೋಟಾ ಶೋರೂಂನಲ್ಲಿ ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುವ ರೋಷನ್, ತಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಬಳಸಿ ವಂಚಕರು ರೋಷನ್ ಎಂಟರ್ಪ್ರೈಸಸ್ ಹೆಸರಿನಲ್ಲಿ ನಕಲಿ ಜಿಎಸ್‌ಟಿ ಖಾತೆ ತೆರೆದು ಪ್ಲಾಸ್ಟಿಕ್ ವ್ಯಾಪಾರ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ತಮ್ಮ ಹೆಸರಿನಲ್ಲಿ 350 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿರುವ ಬಗ್ಗೆ ಸಿಜಿಎಸ್‌ಟಿ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದಾಗ ರೋಷನ್‌ಗೆ ತಿಳಿಯಿತು. ತಕ್ಷಣವೇ ಸೈಬರ್ ಅಪರಾಧ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ. ರೋಷನ್ ಅವರ ತಂದೆ ಹಮಾಲಿ ಕೆಲಸ ಮಾಡುತ್ತಿದ್ದು, ಕುಟುಂಬ ಆರ್ಥಿಕವಾಗಿ ದುರ್ಬಲವಾಗಿದೆ. ಇಷ್ಟು ದೊಡ್ಡ ಮೊತ್ತದ ವಹಿವಾಟು ನಡೆಸುವ ಸಾಮರ್ಥ್ಯ ತಮಗಿಲ್ಲ ಎಂದು ರೋಷನ್ ಸ್ಪಷ್ಟಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ರೋಷನ್ ಅವರ ಪ್ರಕಾರ, ವಂಚಕರು ಅವರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡು ರೋಷನ್ ಎಂಟರ್ಪ್ರೈಸಸ್ ಎಂಬ ಹೆಸರಿನಲ್ಲಿ ಜಿಎಸ್‌ಟಿ ನೋಂದಣಿ ಮಾಡಿಸಿದ್ದಾರೆ. ಈ ನಕಲಿ ಸಂಸ್ಥೆಯು ಐದು ತಿಂಗಳ ಅವಧಿಯಲ್ಲಿ ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ 350 ಕೋಟಿ ರೂ. ಮೌಲ್ಯದ ವ್ಯವಹಾರ ನಡೆಸಿದೆ. ರೋಷನ್ ಕುಟುಂಬವು ಆರ್ಥಿಕವಾಗಿ ದುರ್ಬಲವಾಗಿದ್ದು, ಅವರ ತಂದೆ ಹಮಾಲಿ ಕೆಲಸ ಮಾಡುತ್ತಾರೆ. ಡಿಪ್ಲೋಮಾ ಓದಿ 15 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡುತ್ತಿರುವ ತಮಗೆ ಇಷ್ಟು ದೊಡ್ಡ ಮೊತ್ತದ ವಹಿವಾಟು ನಡೆಸುವ ಯಾವ ವ್ಯವಹಾರವೂ ಇಲ್ಲ ಎಂದು ರೋಷನ್ ಸ್ಪಷ್ಟಪಡಿಸಿದ್ದಾರೆ.
ಈ ಬೃಹತ್ ವಂಚನೆ ಬೆಳಕಿಗೆ ಬಂದಿದ್ದು ಸಿಜಿಎಸ್‌ಟಿ (ಕೇಂದ್ರ ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳ ಮೂಲಕ. ಅಧಿಕಾರಿಗಳು ರೋಷನ್ ಅವರ ಮನೆಗೆ ಭೇಟಿ ನೀಡಿ ಅವರ ಹೆಸರಿನಲ್ಲಿ ನಡೆದಿರುವ ವ್ಯವಹಾರದ ಬಗ್ಗೆ ವಿಚಾರಿಸಿದಾಗ, ರೋಷನ್ ಮತ್ತು ಅವರ ಕುಟುಂಬಕ್ಕೆ ಈ ಕುರಿತು ಮಾಹಿತಿ ಲಭಿಸಿತು. ತಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ಬೃಹತ್ ಮೊತ್ತದ ವಹಿವಾಟು ಅಥವಾ ಎಸ್‌ಎಂಎಸ್ ಬಂದಿಲ್ಲ ಎಂದೂ ರೋಷನ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ನಂತರ ರೋಷನ್ ಮತ್ತು ಅವರ ಆಡಿಟರ್, ಸೈಬರ್ ಅಪರಾಧ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಈ ನಕಲಿ ವ್ಯವಹಾರಗಳು ದೆಹಲಿ ಮತ್ತು ಜಾರ್ಖಂಡ್‌ನಂತಹ ಸ್ಥಳಗಳಲ್ಲೂ ನಡೆದಿವೆ ಎಂದು ಆಡಿಟರ್ ಮಾಹಿತಿ ನೀಡಿದ್ದಾರೆ. “ನಮ್ಮ ಡಾಕ್ಯುಮೆಂಟ್‌ಗಳನ್ನು ಹೀಗೆ ದುರ್ಬಳಕೆ ಮಾಡಿಕೊಂಡರೆ ನಮ್ಮ ಕುಟುಂಬಕ್ಕೆ ತೀವ್ರ ತೊಂದರೆಯಾಗುತ್ತದೆ. ಕೆಲಸಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ,” ಎಂದು ರೋಷನ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
