KSRTC ಬಸ್ ಬ್ರೇಕ್ ಫೇಲ್; ಆಟೋ, ಹಣ್ಣಿನ ಅಂಗಡಿಗೆ ಡಿಕ್ಕಿ! ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ
ಬಳ್ಳಾರಿ ನಗರದ ಮೋತಿ ವೃತ್ತದ ಬಳಿ ಕೆಎಸ್ಆರ್ಟಿಸಿ ಬಸ್ ಬ್ರೇಕ್ ಫೇಲ್ ಆಗಿ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್, ಆಟೋರಿಕ್ಷಾ, ಹಣ್ಣಿನ ಅಂಗಡಿ, ಟೀ ಅಂಗಡಿ ಹಾಗೂ ಜಾಹೀರಾತು ಫಲಕಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಸ್ತಿಪಾಸ್ತಿ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಳ್ಳಾರಿ, ಮಾ.25: ನಗರದ ಮೋತಿ ವೃತ್ತದ ಬಳಿ ಕೆಎಸ್ಆರ್ಟಿಸಿ ಸಾರಿಗೆ ಬಸ್ ಅಪಘಾತಕ್ಕೀಡಾಗಿದೆ. ಬಸ್‌ನ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಬಸ್ ವೇಗವಾಗಿ ಸಾಗಿ, ರಸ್ತೆ ಬದಿಯಲ್ಲಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ನಂತರ ಹಣ್ಣಿನ ಅಂಗಡಿ, ಟೀ ಅಂಗಡಿ ನುಗ್ಗಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಫ್ರೂಟ್ಸ್ ಅಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ. ಅಲ್ಲದೆ, ಅಪಘಾತಕ್ಕೆ ಸಿಲುಕಿದ ಆಟೋರಿಕ್ಷಾ ಕೂಡ ಜಖಂಗೊಂಡಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದು ದೊಡ್ಡ ಅನಾಹುತವನ್ನು ತಪ್ಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳ್ಳಾರಿ ನಗರ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ನಿಖರ ಕಾರಣಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Mar 25, 2026 04:48 PM
Follow Us
