ಬಳ್ಳಾರಿಯಲ್ಲಿ ಭುಗಿಲೆದ್ದ ಆಕ್ರೋಶ: ಎಲ್ಲೆಲ್ಲೂ ಖಾಕಿ ಸರ್ಪಗಾವಲು
ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಿಂದ ಹೊತ್ತಿಕೊಂಡಿದ್ದ ರಾಜಕೀಯ ಬೆಂಕಿ ಈಗ ಶಾಸಕ ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ನ್ನು ಸುಟ್ಟುಹಾಕುವಲ್ಲಿಗೆ ತಲುಪಿದೆ. ಇದು ಶಾಸಕ ಭರತ್ ರೆಡ್ಡಿ ಬೆಂಬಲಿಗರದ್ದೇ ಕೃತ್ಯ ಎಂದು ರೆಡ್ಡಿ ಸಹೋದರರು ಆರೋಪಿಸುತ್ತಿದ್ದಾರೆ. ಇದರಿಂದದ ಬಳ್ಳಾರಿಯಲ್ಲಿ ರೆಡ್ಡಿಗಳ ಮಧ್ಯೆ ಹೊಸ ಕಾಳಗ ಶುರುವಾಗಿದ್ದು, ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಬಳ್ಳಾರಿ, ಜನವರಿ 24: ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ಶುರುವಾದ ಗಲಾಟೆ ಇನ್ನೂ ಸಂಪೂರ್ಣವಾಗಿ ತಣ್ಣಗಾಗಿಲ್ಲ. ಗನ್‌ಮ್ಯಾನ್‌ಗಳಿಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಅಷ್ಟರಲ್ಲೇ ರೆಡ್ಡಿಗಳ ಮಧ್ಯೆ ಈಗ ಬೆಂಕಿ ರಾಜಕೀಯ ಶುರುವಾಗಿದೆ. ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲುಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದಿದೆ. ಬಳ್ಳಾರಿಯ ಜಿ ಸ್ಕ್ವೇರ್‌ನಲ್ಲಿರುವ ಲೇಔಟ್‌ನಲ್ಲಿರುವ ಮಾಡೆಲ್ ಹೌಸ್ ಹೊತ್ತಿ ಉರಿದಿದೆ. ಇದು ಶಾಸಕ ಭರತ್ ರೆಡ್ಡಿ ಅವರದ್ದೇ ಕೃತ್ಯ ಎಂದು ರೆಡ್ಡಿ ಸಹೋದರರು ಆರೋಪಿಸಿದ್ದಾರೆ. ಘಟನೆ ಖಂಡಿಸಿ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿದೆ. ಸದ್ಯ ಬಳ್ಳಾರಿ ಉದ್ವಿಗ್ನಗೊಂಡಿದ್ದು, ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
