10 ತಿಂಗಳ ಚಿರತೆಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾದ ಬನ್ನೇರುಘಟ್ಟ ಉದ್ಯಾನವನದ ವೈದ್ಯರು

| Updated By: ವಿವೇಕ ಬಿರಾದಾರ

Updated on: Jul 11, 2024 | 11:41 AM

ಡಯಾಪ್ರಾಗ್ನಮ್ಯಾಟಿಕ್ ಹರ್ನಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮೂರು ಕಾಲಿನ ಚಿರತೆಗೆ ಶಸ್ತ್ರಚಿಕಿತ್ಸೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ಯಶಸ್ವಿಯಾಗಿದ್ದಾರೆ. ಇದು ಏಷ್ಯಾದಲ್ಲಿ ನಡೆದ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಶು ಆಸ್ಪತ್ರೆಯಲ್ಲಿ ಚಿರತೆಗೆ ಹಾರೈಕೆ ಮಾಡಲಾಗುತ್ತಿದೆ.

ಆನೇಕಲ್, ಜುಲೈ 10: ಬನ್ನೇರುಘಟ್ಟ ಜೈವಿಕ ಉದ್ಯಾನವನದ (Bannerughatta Biological Park) ವೈದ್ಯರು ಸಾಧನೆ ಮಾಡಿದ್ದಾರೆ. ಡಯಾಪ್ರಾಗ್ನಮ್ಯಾಟಿಕ್ ಹರ್ನಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮೂರು ಕಾಲಿನ ಚಿರತೆಗೆ (Leopard) ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಇದು ಏಷ್ಯಾದಲ್ಲಿ ನಡೆದ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಹೊಟ್ಟೆ ಬಾಗ ಮತ್ತು ಶ್ವಾಸಕೋಶ ಬೇರ್ಪಡಿಸುವ ವಪೆ ಹರಿದು ಚಿರತೆ ಉಸಿರಾಡಲು ಕಷ್ಟಪಡುತ್ತಿತ್ತು. ಓಡಾಡಲೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಚಿರತೆಗೆ ತಿಂದ ಆಹಾರ ಜೀರ್ಣಾವಾಗದೆ ವಾಂತಿಯಾಗುತ್ತಿತ್ತು. ಅಪರೂಪದ ಕಾಯಿಲೆಯಿದ ಬಳಲಿ ಚಿರತೆಯ ತೂಕ 13 ಕೆಜಿಗೆ ಇಳಿದಿತ್ತು.

ಇದನ್ನು ತಿಳಿದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಚಿರತೆ ಸ್ಥಿತಿ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಸೂಚಿಸಿದ ಬಳಿಕ ಕಳೆದ ಮಾರ್ಚ್​ನಲ್ಲಿ ಹೊಟ್ಟೆ ಬಾಗ ಮತ್ತು ಶ್ವಾಸಕೋಶ ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಮಾಡಿದರು. ಉದ್ಯಾನವನದ ವೈದ್ಯ ಡಾ ಕಿರಣ್ ಕುಮಾರ್, ಡಾ ಆನಂದ್ ಮತ್ತು ಮಂಜುನಾಥ್ ತಂಡದ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಆರೇಳು ತಿಂಗಳುಗಳ ಕಾಲ ಚಿರತೆಯನ್ನು ಜೋಪಾನವಾಗಿ ಪೋಷಣೆ ಮಾಡಲಾಯಿತು.

ಇದರಿಂದ ಸದ್ಯ ಚಿರತೆ 40 ಕೆಜಿ ತೂಕ ಹೆಚ್ಚಿಸಿಕೊಂಡು ಲವಲವಿಕೆಯಿಂದ ಇದೆ. ಇಂತಹ ಶಸ್ತ್ರಚಿಕಿತ್ಸೆ ಈ ಹಿಂದೆ ಯಶಸ್ವಿಯಾದ ಉದಾಹರಣೆಗಳಿಲ್ಲ. ಆದರೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈಧ್ಯಕೀಯ ತಂಡ ಯಶಸ್ವಿಯಾಗಿದೆ. ಸದ್ಯ ಹತ್ತು ತಿಂಗಳ ಚಿರತೆ ಆರೋಗ್ಯವಾಗಿದೆ.

ಮೂರು ವಾರದ ಮರಿ ಇದ್ದಾಗ ಚಿರತೆ ಮೈಸೂರಿನ ರೈತರ ಹೊಲದಲ್ಲಿ ಸಿಕ್ಕಿತ್ತು. ಚಿರತೆ ಮರಿಯನ್ನು ರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆ ತರಲಾಗಿತ್ತು. ರಕ್ಷಣೆ ವೇಳೆ ಕಾಲು ಮುರಿದು ನಡೆದಾಡಲು ಆಗುತ್ತಿರಲಿಲ್ಲ. ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಶು ಆಸ್ಪತ್ರೆಯಲ್ಲಿ ಚಿರತೆಗೆ ಹಾರೈಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಗಂಡು ಮಗುವಿಗೆ ಜನ್ಮ ನೀಡಿದ ರೀಟಾ, ವಿಡಿಯೋ ನೋಡಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ