ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್​ಗಿಲ್ಲ: ಎಂಪಿ ರೇಣುಕಾಚಾರ್ಯ

|

Updated on: Dec 08, 2023 | 2:29 PM

ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಎಸ್ ಯಡಿಯೂರಪ್ಪ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಕರೆತರುವಾಗ ಜಗದೀಶ್ ಶೆಟ್ಟರ್ ನಕರಾತ್ಮಕ ಅಭಿಪ್ರಾಯ ನೀಡಿದ್ದರು ಎಂಬ ಇದುವರೆಗೆ ನಿಗೂಢವಾಗಿದ್ದ ರಹಸ್ಯವನ್ನು ರೇಣುಕಾಚಾರ್ಯ ಬಹಿರಂಗಗೊಳಿಸಿದರು. ತಮ್ಮ ಅಭ್ಯಂತರವಿಲ್ಲ ಆದರೆ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಯೋಚನೆ ಮಾಡಿ ಎಂದು ಶೆಟ್ಟರ್, ಯಡಿಯೂರಪ್ಪಗೆ ಹೇಳಿದ್ದರಂತೆ.

ದಾವಣಗೆರೆ: ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ಇವತ್ತು ಸಹ ತರಾಟೆಗೆ ತೆಗೆದುಕೊಂಡರು. ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಕುಟುಂಬದ ವಿರುದ್ಧ ಅವರು ಪದೇಪದೆ ಮಾಡುತ್ತಿರುವ ಆರೋಪಗಳು ರೇಣುಕಾಚಾರ್ಯರನ್ನು ಕೆರಳಿಸುತ್ತಿವೆ. ಬಸನಗೌಡ ಒಬ್ಬ ಹಿರಿಯ ನಾಯಕನಾಗಿರುವುದರಿಂದ ಅವರ ಬಗ್ಗೆ ಗೌರವ ಇದೆ, ಆದರೆ ಅವರು ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರರನ್ನು ಮೇಲಿಂದ ಮೇಲೆ ಟೀಕಿಸುವ ಮೂಲಕ ಜನರ ದೃಷ್ಟಿಯಲ್ಲಿ ಖಳನಾಯಕನಾಗುತ್ತಿದ್ದಾರೆ. ಅಸಲಿಗೆ ಯಡಿಯೂರಪ್ಪರನ್ನು ಟೀಕಿಸುವ ನೈತಿಕ ಹಕ್ಕು ಯತ್ನಾಳ್ ಗೆ ಇಲ್ಲ, ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ ಮತ್ತು ಅಮಿತ್ ಶಾ. ಯತ್ನಾಳ್ ವರಿಷ್ಠರ ಅಯ್ಕೆ ಪ್ರಶ್ನಿಸುವಷ್ಟು ದೊಡ್ಡವರೇ ಎಂದು ರೇಣುಕಾಚಾರ್ಯ ಹೇಳಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ, ಅವರೊಬ್ಬ ಹೋರಾಟಗಾರ, ಮಾಸ್ ಲೀಡರ್ ಮತ್ತು ಪ್ರಶ್ನಾತೀತ ನಾಯಕ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಗಿದ್ದೇ ಯಡಿಯೂರಪ್ಪ ಅವರಿಂದ ಮತ್ತು ಯತ್ನಾಳ್ ರನ್ನು ಕೇಂದ್ರದಲ್ಲಿ ಮಂತ್ರಿ ಮಾಡಿದ್ದು ಯಡಿಯೂರಪ್ಪ ಎಂದ ರೇಣುಕಾಚಾರ್ಯ ಇನ್ನಾದರೂ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮಾತಾಡೋದನ್ನು ಯತ್ನಾಳ್ ನಿಲ್ಲಿಸಲಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ