ಕೇವಲ ದ್ವೇಷದ ರಾಜಕಾರಣ ಮಾಡುವ ಬಸನಗೌಡ ಯತ್ನಾಳ್ ಒಬ್ಬ ಸುಳ್ಳುಗಾರ: ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಸನಗೌಡ ಪಾಟೀಲ್ ಯತ್ನಾಳ್ ತಾನು ಹಿಟ್ ಅಂಡ್ ರನ್ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ನಿನ್ನೆ ಟಿವಿ9 ಜೊತೆ ಮಾತಾಡುವಾಗ ಎಲ್ಲ ದಾಖಲೆಯಿಟ್ಟುಕೊಂಡು ಮಾತಾಡುತ್ತಿರುವುದಾಗಿ ಹೇಳಿದ್ದ ಅವರು, ತನ್ವೀರ್ ಪೀರಾ ಎಸೆದಿರುವ ಸವಾಲಿನ ಬಗ್ಗೆ ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ತಿಳಿಸಿದಾಗ ಅಕ್ಷರಶಃ ಪಲಾಯನಗೈದರು. ಅವರೊಂದಿಗೆ ನಿಂತು ಮಾತಾಡುವ ವ್ಯವಧಾನ ಕೂಡ ಅವರು ತೋರಲಿಲ್ಲ. ಆರೋಪ ಸಾಬೀತಾದರೆ ದೇಶ ತೊರೆಯುತ್ತೇನೆ, ಇಲ್ಲದಿದ್ದರೆ ಯತ್ನಾಳ್ ರಾಜಕಾರಣ ಬಿಡ್ತಾರೆಯೇ ಅಂತ ಪೀರಾ ಕೇಳಿದ್ದಾರೆ.
ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ದ್ವೇಷದ ರಾಜಕಾರಣ ಮಾಡುತ್ತಾರೆ, ಅಸಲಿಗೆ ಅವರು ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುತ್ತದೆ ಇಲ್ಲವೇ ಬಿಜೆಪಿ ರಾಜ್ಯಾಧ್ಯಕ್ಷ ಮಾಡ್ತಾರೆ ಅಂದುಕೊಂಡಿದ್ದರು, ಎರಡೂ ಸಿಗದ ಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಸಿದ್ದರಾಮಯ್ಯ ಭಾಗವಹಿಸಿದ್ದ ಮುಸ್ಲಿಂ ಸಮಾವೇಶದಲ್ಲಿ ವೇದಿಕೆ ಮೇಲೆ ಅವರೊಂದಿಗಿದ್ದ ವಿಜಯಪುರದ ಮೌಲ್ವಿ ತನ್ವೀರ್ ಪೀರಾ (cleric Tanveer Peera) ಅವರಿಗೆ ಐಸಿಸ್ (ISIS) ಜೊತೆ ಸಂಪರ್ಕವಿದೆ ಅಂತ ಯತ್ನಾಳ್ ನಿನ್ನೆ ಬೆಳಗಾವಿಯಲ್ಲಿ ಟಿವಿ9 ವರದಿಗಾರನಿಗೆ ಹೇಳಿದ್ದರು. ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತನಗೆ ಪೀರಾ ಹತ್ತಾರು ವರ್ಷಗಳಿಂದ ಗೊತ್ತು ಮತ್ತು ಯತ್ನಾಳ್ ಅದನ್ನು ಬಲ್ಲರು. ಹಾಗಿರುವಾಗ ಅವರು ಇಷ್ಟು ವರ್ಷ ಯಾಕೆ ಸುಮ್ಮನಿದ್ದರು? 10 ವರ್ಷಗಳಿಂದ ಕೇಂದ್ರದಲ್ಲಿ ಅವರದ್ದೇ ಸರಕಾರವಿದೆಯಲ್ಲ, ತನಿಖೆ ಮಾಡಿಸಲು ಅವರನ್ನು ಯಾರು ತಡೆದಿದ್ದರು, ತಾವು ಮಾಡುವ ಆರೋಪಗಳನ್ನು ಸಾಬೀತು ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದರು. ಅಸಲಿಗೆ ಯತ್ನಾಳ್ ಮಹಾ ಸುಳ್ಳುಗಾರ, ಅಲ್ಪಸಂಖ್ಯಾತರ ವಿರೋಧಿ ನಿಲುವೇ ಅವರ ರಾಜಕಾರಣದ ಅಜೆಂಡಾ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ