ಚಳಿಯನ್ನೂ ಲೆಕ್ಕಿಸದೆ ಮೈದಾನದಲ್ಲೇ ಮಲಗಿದ ಆರ್ಮಿ ಸೇರಲು ಬಂದ ಯುವಕರು!
ಬೆಳಗಾವಿಯಲ್ಲಿ ಟೆರಿಟೋರಿಯಲ್ ಆರ್ಮಿ ನೇತೃತ್ವದಲ್ಲಿ ನಡೆಯುತ್ತಿರುವ ಸೇನಾ ಭರ್ತಿ ರ‍್ಯಾಲಿಯಲ್ಲಿ ಸಾವಿರಾರು ಯುವಕರು ಭಾಗವಹಿಸಿದ್ದಾರೆ. ಬೆಳಗಾವಿ ನಗರದ ಕ್ಲಬ್ ರೋಡ್ ಹಾಗೂ ಸಿಪಿಎಡ್ ಮೈದಾನದಲ್ಲಿ ನೆರೆದಿರುವ ಯುವಕರು, ಚಳಿಯನ್ನೂ ಲೆಕ್ಕಿಸದೆ ಸೇನೆಗೆ ಸೇರುವ ಉತ್ಸಾಹ ತೋರಿದ್ದಾರೆ. ದೇಶಸೇವೆಗೆ ಸಿದ್ಧವಾಗಿರುವ ಯುವಕರ ಈ ಸಮರ್ಪಣಾ ಭಾವ ಗಮನಾರ್ಹವಾಗಿದೆ.
ಬೆಳಗಾವಿ, ನವೆಂಬರ್ 23: ಬೆಳಗಾವಿಯಲ್ಲಿ(Belagavi) ಭಾರತೀಯ ಸೇನೆಯ ಭರ್ತಿ ರ‍್ಯಾಲಿಯು ಯಶಸ್ವಿಯಾಗಿ ನಡೆಯುತ್ತಿದೆ. ಟೆರಿಟೋರಿಯಲ್ ಆರ್ಮಿ ನೇತೃತ್ವದಲ್ಲಿ ನಡೆಯುತ್ತಿರುವ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸಾವಿರಾರು ಯುವಕರು ಭಾಗವಹಿಸಿದ್ದಾರೆ. ಬೆಳಗಾವಿ ನಗರದ ಕ್ಲಬ್ ರೋಡ್‌ನಲ್ಲಿ ಸೇನಾ ಭರ್ತಿಗಾಗಿ ಅಪಾರ ಸಂಖ್ಯೆಯ ಯುವಕರು ಜಮಾಯಿಸಿದ್ದು, ಆಗಮಿಸಿರುವ ಯುವಕರ ಗುಂಪು ಚಳಿಯನ್ನೂ ಲೆಕ್ಕಿಸದೆ ಕ್ಯಾಂಪ್ ಪ್ರದೇಶದ ಸಿಪಿಎಡ್ ಮೈದಾನದಲ್ಲಿ ಮಲಗಿರುವುದು ಕಂಡುಬಂತು. ಸೇನೆಯ ಜನರಲ್ ಡ್ಯೂಟಿ ಮತ್ತು ಟ್ರೇಡ್ಸ್‌ಮನ್ ಹುದ್ದೆಗಳಿಗೆ ನಡೆಯುತ್ತಿರುವ ಈ ಭರ್ತಿಗೆ ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ, ದಾವಣಗೆರೆ ಸೇರಿದಂತೆ ಹಲವು ಭಾಗಗಳಿಂದ ಯುವಕರು ಬಂದಿದ್ದು, ನಸುಕಿನ ಜಾವದ ಚಳಿಯಿದ್ದರೂ, ದೇಶ ಸೇವೆ ಮಾಡುವ ಮಹದಾಸೆಯೊಂದಿಗೆ ಯುವಕರು ಶಿಸ್ತಿನಿಂದ ಕಾಯುತ್ತಿರುವುದು ಕಂಡುಬಂತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
