AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಬಸ್ ಸೌಕರ್ಯದ ಕೊರತೆ; ಜೀವದ ಹಂಗು ತೊರೆದು ಫುಟ್‌ಬೋರ್ಡ್ ಪ್ರಯಾಣ ಮಾಡುತ್ತಿರುವ ವಿದ್ಯಾರ್ಥಿಗಳು

ಬೆಳಗಾವಿಯಲ್ಲಿ ಬಸ್ ಸೌಕರ್ಯದ ಕೊರತೆ; ಜೀವದ ಹಂಗು ತೊರೆದು ಫುಟ್‌ಬೋರ್ಡ್ ಪ್ರಯಾಣ ಮಾಡುತ್ತಿರುವ ವಿದ್ಯಾರ್ಥಿಗಳು

ಸಹದೇವ್​ ಮಾನೆ
| Edited By: |

Updated on:Jul 18, 2026 | 3:35 PM

Share

ಬೆಳಗಾವಿಯಲ್ಲಿ KSRTC ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಪ್ರತಿದಿನ ಜೀವದ ಹಂಗು ತೊರೆದು ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಶಾಲಾ-ಕಾಲೇಜು ಸಮಯದ ಬಸ್‌ಗಳ ಸಂಖ್ಯೆ ವಿರಳವಾಗಿದ್ದು, ಸಣ್ಣ ಆಯತಪ್ಪಿದರೂ ದೊಡ್ಡ ದುರಂತ ಸಂಭವಿಸುವ ಭೀತಿ ಇದೆ. ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಿದ್ದು, ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಬಸ್ ಸೌಲಭ್ಯ ಹೆಚ್ಚಿಸುವಂತೆ ಒತ್ತಾಯ ಕೇಳಿಬಂದಿದೆ.

ಬೆಳಗಾವಿ, ಜು.18: ಕುಂದಾನಗರಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪಾಲಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಪ್ರಯಾಣವು ಪ್ರತಿನಿತ್ಯ ಯಮಲೋಕದ ದರ್ಶನ ಮಾಡಿಸುವಂತಾಗಿದೆ. ನಗರದಲ್ಲಿ ಸೂಕ್ತ ಬಸ್ ಸೌಕರ್ಯ ಇಲ್ಲದ ಕಾರಣ, ನಿತ್ಯ ನೂರಾರು ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಬಸ್‌ನ ಫುಟ್‌ಬೋರ್ಡ್ (Footboard) ಮೇಲೆ ನೇತಾಡಿಕೊಂಡೇ ಸಂಚರಿಸುವ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲೇ ಈ ಭಯಾನಕ ದೃಶ್ಯಗಳು ಪ್ರತಿದಿನ ಕಂಡುಬರುತ್ತಿದ್ದರೂ ಸಾರಿಗೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಶಾಲಾ-ಕಾಲೇಜು ಬಿಡುವ ಸಮಯದಲ್ಲಿ ಬೆಳಗಾವಿ ನಗರದ ಪ್ರಮುಖ ಮಾರ್ಗಗಳಿಗೆ ಸಂಚರಿಸುವ ಬಸ್‌ಗಳ ಸಂಖ್ಯೆ ತೀರಾ ವಿರಳವಾಗಿದೆ. ಹೀಗಾಗಿ, ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆಯೇ ಸೀಟು ಹಿಡಿಯಲು ವಿದ್ಯಾರ್ಥಿಗಳು ಒಮ್ಮೆಗೇ ಮುಗಿಬೀಳುತ್ತಿದ್ದಾರೆ. ಬಸ್‌ನ ಒಳಭಾಗ ಸಂಪೂರ್ಣ ಭರ್ತಿಯಾದ ಮೇಲೆಯೂ ಜಾಗವಿಲ್ಲದೆ, ಬಸ್ ನಿಲ್ದಾಣದಿಂದ ಹೊರಡುವಾಗಲೇ ವಿದ್ಯಾರ್ಥಿಗಳು ಬಾಗಿಲಿನ ಮೆಟ್ಟಿಲುಗಳ ಮೇಲೆ ನಿಂತು ಸಾಗುತ್ತಿದ್ದಾರೆ. ಸಣ್ಣದೊಂದು ಆಯತಪ್ಪಿದರೂ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲೇ ಇಷ್ಟೆಲ್ಲಾ ಜೀವವಿರೋಧಿ ದೃಶ್ಯಗಳು ಕಣ್ಣೆದುರೇ ನಡೆಯುತ್ತಿದ್ದರೂ, ಅಲ್ಲಿನ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ತಡೆಯುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬಸ್‌ಗಳ ಸಂಖ್ಯೆ ಹೆಚ್ಚಿಸದ ಅಧಿಕಾರಿಗಳ ಬೇಜವಾಬ್ದಾರಿತನವೇ ಮಕ್ಕಳ ಈ ಅಪಾಯಕಾರಿ ಪ್ರಯಾಣಕ್ಕೆ ನೇರ ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Jul 18, 2026 03:29 PM

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More