ಖಾಸಗಿ ಕಂಪನಿಗಳ ಅನುಕೂಲಕ್ಕಾಗಿ ಕರ್ನಾಟಕದ ಚಾಲಕರಿಗೆ ಅನ್ಯಾಯ ಮಾಡಬೇಡಿ: ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 1ರ ಪಿಕಪ್ ಪಾಯಿಂಟ್‌ನಿಂದ ಟ್ಯಾಕ್ಸಿಗಳಿಗೆ ನಿರ್ಬಂಧ ಹೇರಿದ್ದರಿಂದ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೂರುಗಳ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಏರ್‌ಪೋರ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡುವ ಅಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲು ಸೂಚಿಸಿದ್ದಾರೆ. ಸಾರ್ವಜನಿಕರಿಗೂ ತೊಂದರೆಯಾಗದಂತೆ ಕ್ರಮಕ್ಕೆ ಆದೇಶಿಸಿದರು.
ಬೆಂಗಳೂರು, ಜ.8: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Bengaluru Airport) ಟ್ಯಾಕ್ಸಿಗಳಿಗೆ ನಿರ್ಬಂಧ ಮಾಡಿರುವ ಬಗ್ಗೆ ಸಾರಿಗೆ ಸಚಿವರಿಗೆ ಚಾಲಕರು ದೂರು ನೀಡಿದರು. ಇದೀಗ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದಾರೆ. ವಿಮಾನ ನಿಲ್ಥಾಣದ ಟರ್ಮಿನಲ್ 1ರ ಪಿಕಪ್ ಪಾಯಿಂಟ್ನಲ್ಲಿ ಕಳೆದ ಡಿಸೆಂಬರ್ 11ರಿಂದ ಹಳದಿ ಬೋರ್ಡ್ ಕ್ಯಾಬ್ಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಹೀಗಾಗಿ ವಿಮಾನ ನಿಲ್ದಾಣದ ಈ ಹೊಸ ರೂಲ್ಸ್ನಿಂದ ಟ್ಯಾಕ್ಸಿ ಚಾಲಕರಿಗೆ ಸಂಕಷ್ಟ ಶುರುವಾಗಿದೆ. ಎಂದಿನಂತೆ ಪಿಕಪ್ ಪಾಯಿಂಟ್ ಗೆ ಅನುಮತಿ ಕೊಡಿಸುವಂತೆ ಚಾಲಕರು ಸಾರಿಗೆ ಸಚಿವರ ಮೊರೆ ಹೋಗಿದ್ದರು. ಇನ್ನು ಚಾಲಕರ ಮನವಿ ಹಿನ್ನಲೆಯಲ್ಲಿ ಸಚಿವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪಾರ್ಕಿಂಗ್ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಟರ್ಮಿನಲ್ ನಿಂದ ಟ್ಯಾಕ್ಸಿ ಚಾಲಕರಿಗೆ ನೀಡಿರುವ ಪಿಕಪ್ ಪಾಯಿಂಟ್ ದೂರವಿದ್ದು ಪ್ರಯಾಣಿಕರು ಬರಲು ಕಷ್ಟವಾಗುತ್ತೆ ಮೊದಲು ಇದ್ದಲ್ಲೆ ಇವರಿಗೂ ಅವಕಾಶ ನೀಡಬಹುದಲ್ವಾ ಎಂದು ಕೇಳಿದ್ದಾರೆ. ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ಅನ್ಯಾಯ ಮಾಡಲು ಹೊರಟಿದ್ದು ಇದು ಸರಿಯಲ್ಲ ಎಂದು ಅಸಮಧಾನ ಹೊರ ಹಾಕಿದರು. ಟರ್ಮಿನಲ್ 1ರ ಬಿಎಂಟಿಸಿ ಬಸ್ ನಿಲ್ದಾಣದಲ್ಲೂ ಕೂಡ 14 ಇದ್ದ ಬಸ್ಗಳನ್ನು 7ಕ್ಕೆ ಇಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ವಾ? ಎಂದು ಏರ್ಪೋಟ್ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

