ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ಉಷ್ಣಾಂಶ

Edited By:

Updated on: Sep 10, 2026 | 11:56 AM

ಮಳೆಗಾಲದ ನಡುವೆಯೂ ಬೆಂಗಳೂರಿನಲ್ಲಿ ಅಸಾಮಾನ್ಯ ಬಿಸಿಲಿನ ತಾಪ ಹೆಚ್ಚಾಗಿದ್ದು, ಕಳೆದ ಒಂದು ವಾರದಿಂದ 31.22°C ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಸೆಪ್ಟೆಂಬರ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನವಾಗಿದೆ. ಎಲ್ ನಿನೋ ಪರಿಣಾಮ, ಮಳೆ ಮತ್ತು ಮೋಡಗಳ ಕೊರತೆಯಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರುವ ಸಾಧ್ಯತೆಯಿದೆ.

ಬೆಂಗಳೂರು, ಸೆಪ್ಟೆಂಬರ್ 10: ಸಾಮಾನ್ಯವಾಗಿ ಮಳೆಗಾಲವಾಗಿರುವ ಸೆಪ್ಟೆಂಬರ್ ತಿಂಗಳಲ್ಲಿ, ಬೆಂಗಳೂರು ಅಸಾಮಾನ್ಯ ಬಿಸಿಲಿನ ತಾಪ ಎದುರಿಸುವಂತಾಗಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಗರಿಷ್ಠ 31.22°C ತಾಪಮಾನ ದಾಖಲಾಗಿದ್ದು, ಇದು ಸೆಪ್ಟೆಂಬರ್‌ನಲ್ಲಿ ಕಳೆದ ಮೂರು ವರ್ಷಗಳಲ್ಲೇ ಅತಿ ಹೆಚ್ಚು ಎನ್ನಲಾಗಿದೆ. ಹವಾಮಾನ ತಜ್ಞರ ಪ್ರಕಾರ, ಪ್ರಸ್ತುತ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32-33°C ಆಸುಪಾಸಿನಲ್ಲಿದ್ದು, ಇದು ವಾಡಿಕೆಗಿಂತ 4°C ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ 33°C ಆಸುಪಾಸಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಅನಿರೀಕ್ಷಿತ ಬಿಸಿಲಿಗೆ ಪ್ರಮುಖ ಕಾರಣ ಎಲ್ ನಿನೋ ಪರಿಣಾಮ ಎಂದು ಹವಾಮಾನ ತಜ್ಞ ಸಿಎಸ್​ ಪಾಟೀಲ್ ವಿಶ್ಲೇಷಿಸಿದ್ದಾರೆ. ‘ಟಿವಿ9’ ಜತೆ ಮಾತನಾಡಿದ ಅವರು, ಮೋಡಗಳ ಕೊರತೆ ಮತ್ತು ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು ಭೂಮಿ ಬೇಗ ಬಿಸಿಯಾಗಲು ಕಾರಣವಾಗಿದೆ. ಮಣ್ಣಿನಲ್ಲಿನ ತೇವಾಂಶದ ಕೊರತೆಯೂ ತಾಪಮಾನ ಏರಿಕೆಗೆ ಸಹಕಾರಿಯಾಗಿದೆ. ಮುಂದಿನ ಒಂದು ವಾರದವರೆಗೆ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 16 ರ ನಂತರ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡು, ಕಲಬುರ್ಗಿ, ಉಡುಪಿ ಮತ್ತು ಮಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More