2700 ಅನಾಥ ವಾಹನಗಳನ್ನು ಪಟ್ಟಿ ಮಾಡಿದ್ದೇವೆ, ಟೋಯಿಂಗ್ ಬಳಿಕವೂ ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ

Updated on: Jul 18, 2026 | 12:04 PM

ಬೆಂಗಳೂರು ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿನ ಬೀಡಾಡಿ ವಾಹನಗಳನ್ನು ತೆರವುಗೊಳಿಸಲು ಬೃಹತ್ ಕಾರ್ಯಾಚರಣೆ ಆರಂಭವಾಗಿದೆ. ಸಚಿವ ಕೃಷ್ಣಭೈರೇಗೌಡ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಕ್ರಮವು ಸಂಚಾರ ದಟ್ಟಣೆ, ಪಾದಚಾರಿಗಳ ತೊಂದರೆ ತಪ್ಪಿಸುವ ಹಾಗೂ ನಗರದ ಸೌಂದರ್ಯ ಹೆಚ್ಚಿಸುವ ಗುರಿ ಹೊಂದಿದೆ. ನೋಟಿಸ್ ನೀಡಿದ ವಾಹನಗಳನ್ನು ಟೋಯಿಂಗ್ ಮಾಡಿ, ಮಾಲೀಕರು ಕ್ಲೈಮ್ ಮಾಡದಿದ್ದರೆ ಹರಾಜು ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಜುಲೈ 18: ಬೆಂಗಳೂರು ನಗರದ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿನ ಅನಾಥ ವಾಹನಗಳನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಗೆ ಶನಿವಾರ ಚಾಲನೆ ನೀಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಮಲ್ಲೇಶ್ವರಂನ ಎಂ.ಡಿ.ಬ್ಲಾಕ್‌ನಲ್ಲಿ ಈ ಕಾರ್ಯಾಚರಣೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಜಿಬಿಎ ಮತ್ತು ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ 2700 ಅನಾಥ ವಾಹನಗಳನ್ನು ಪಟ್ಟಿ ಮಾಡಿದ್ದೇವೆ. ಒಂದು ವಾರದ ಮೊದಲು ಇಂತಹ ವಾಹನಗಳಿಗೆ ನೋಟಿಸ್‌ಗಳನ್ನು ಅಂಟಿಸಲಾಗಿತ್ತು. ನೋಟಿಸ್ ನೀಡಿದ ನಂತರವೂ ಮಾಲೀಕರು ಬಂದು ವಾಹನಗಳನ್ನು ಕ್ಲೈಮ್ ಮಾಡದಿದ್ದರೆ, ಅವುಗಳನ್ನು ಟೋಯಿಂಗ್ ಮಾಡಲಾಗುತ್ತದೆ ಎಂದರು.

ಟೋಯಿಂಗ್ ಮಾಡಿದ ವಾಹನಗಳನ್ನು ಜಿಬಿಎ ಜಾಗದಲ್ಲಿ 15 ದಿನಗಳ ಕಾಲ ಇರಿಸಲಾಗುವುದು. ಈ ಅವಧಿಯಲ್ಲಿಯೂ ಮಾಲೀಕರು ಬರದಿದ್ದರೆ, ಕಾನೂನು ಪ್ರಕಾರವಾಗಿ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಸಾರ್ವಜನಿಕರು ರಸ್ತೆಗಳನ್ನು ಮತ್ತು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡದಂತೆ ಅವರು ಮನವಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More