ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ

Updated on: Dec 22, 2025 | 5:55 PM

ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಮೆಟ್ರೋ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಸಂಚಾರ ದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ ಮೆಟ್ರೋ ಜಾಲವನ್ನು ವ್ಯಾಪಕವಾಗಿ ವಿಸ್ತರಿಸಲಾಗುತ್ತಿದೆ. ಸದ್ಯ 96 ಕಿ.ಮೀ. ಮೆಟ್ರೋ ಚಾಲನೆಯಲ್ಲಿದ್ದು, ಡಿಸೆಂಬರ್ 2027ರ ವೇಳೆಗೆ 175 ಕಿ.ಮೀ.ಗೆ ಹೆಚ್ಚಳವಾಗಲಿದೆ. ದೇಶದಲ್ಲೇ ಮೊದಲ ಬಾರಿಗೆ 50 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಯೋಜನೆಯೂ ಇದರಲ್ಲಿ ಸೇರಿದೆ.

ಬೆಂಗಳೂರು, ಡಿಸೆಂಬರ್​ 22: ದೇಶದಲ್ಲೇ ಪ್ರಥಮ ಬಾರಿಗೆ 50 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​​ ಹೇಳಿದ್ದಾರೆ. ಮೆಟ್ರೋ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು ಸುಮಾರು 100 ಕಿ.ಮೀ ಉದ್ದದ ಮೆಟ್ರೋ ಮೂರನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುವುದು. ಈ ಯೋಜನೆಯಲ್ಲಿ ಎಲಿವೇಟೆಡ್ ಕಾರಿಡಾರ್ ಸಹ ಸೇರಿದೆ. ವಿಶೇಷವಾಗಿ, ಒಟ್ಟು 50 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣವು ಈ ಯೋಜನೆಯ ಭಾಗವಾಗಿದೆ ಎಂದರು.

ಈ ಹಿಂದೆ 6 ಕಿ.ಮೀ ಎಲಿವೇಟೆಡ್ ಮಾರ್ಗ ನಿರ್ಮಿಸಲಾಗಿದ್ದು, ಈಗ 42 ರಿಂದ 43 ಕಿ.ಮೀ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ. ಇಷ್ಟು ದೊಡ್ಡ ಮೊತ್ತದ ಎಲಿವೇಟೆಡ್ ಕಾರಿಡಾರ್ ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ. ಈ ಯೋಜನೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ, ರೈಲು ಮತ್ತು ಮೆಟ್ರೋ ಪ್ರಯಾಣಿಕರಿಗೂ ಅನುಕೂಲ ಕಲ್ಪಿಸುವ ಗುರಿ ಹೊಂದಿವೆ ಎಂದು ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಡಿಕೆಶಿ ಪರ ಹಿಂದುಳಿದ ಮಠಾಧೀಶರಿಂದ ಬ್ಯಾಟಿಂಗ್; ಹೈಕಮಾಂಡ್​ಗೆ ಪತ್ರ ಬರೆದು ಪೋಸ್ಟ್

2027ರ ವೇಳೆಗೆ ಮತ್ತೊಂದು 38 ಕಿ.ಮೀ ಮಾರ್ಗ ಪೂರ್ಣಗೊಳ್ಳಲಿದ್ದು, ಇದು ವಿಮಾನ ನಿಲ್ದಾಣ ರಸ್ತೆಯನ್ನು ಸಹ ಒಳಗೊಂಡಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಒಟ್ಟು 175 ಕಿ.ಮೀ ಮೆಟ್ರೋ ಚಾಲನೆಗೆ ಬರಲಿದೆ. ಇದಲ್ಲದೆ, ತಾವರೆಕೆರೆ, ವಾಗ್ಮಿ ರೋಡ್, ಬಿಡದಿ, ನೆಲಮಂಗಲದಂತಹ ಪ್ರದೇಶಗಳಿಗೆ ಮೆಟ್ರೋ ವಿಸ್ತರಣೆಯ ಯೋಜನೆಗಳಿದ್ದು, ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.