ಕಳೆದ ಕೆಲ ದಿನಗಳಿಂದ ಬೆಂಗಳೂರು ನಗರ (Bengaluru City) ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿದಿನ ಸಾಯಂಕಾಲ ಮಳೆ (rains) ಸುರಿದು ಬಿಸಿಲು ಮತ್ತು ಸೆಖೆಯಿಂದ ಕಂಗೆಟ್ಟಿರುವ ನಗರದ ನಿವಾಸಿಗಳಿಗೆ ಆಹ್ಲಾದಕರ (pleasant) ವಾತಾವರಣ ಸೃಷ್ಟಿಯಾಗುತ್ತಿದೆ. ಇದು ನೆಮ್ಮದಿಯ ಅಂಶ ನಿಜವಾದರೂ ಮಳೆ ಮತ್ತು ಜೋರುಗಾಳಿ ಸೃಷ್ಟಿಸುತ್ತಿರುವ ಅವಾಂತರಗಳಿಂದ ಜನ ತೊಂದರೆಗೂ ಒಳಗಾಗಿದ್ದಾರೆ. ಸೋಮವಾರ ನಾವು ನಿಮಗೆ ಗೋರುಗುಂಟೆಪಾಳ್ಯ ಸಿಗ್ನಲ್ ಬಳಿ ಬೃಹತ್ ಗಾತ್ರದ ಮರವೊಂದು ಬಿ ಎಮ್ ಟಿ ಸಿ ಬಸ್ಸೊಂದರ ಮೇಲೆ ಉರುಳಿ ಬಿದ್ದಿದ್ದ ದೃಶ್ಯವನ್ನು ತೋರಿಸಿದೆವು. ಅದೃಷ್ಟವಶಾತ್ ಬಸ್ ನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಲಿಲ್ಲ. ಇಲ್ಲಿ ಬೆಂಗಳೂರಿನ ಗಾಯತ್ರಿನಗರದಲ್ಲಿ ಸೋಮವಾರ ಸಾಯಂಕಾಲ ಸುರಿದ ಮಳೆಯಿಂದಾದ ಆನಾಹುತವನ್ನು ತೋರಿಸುತ್ತಿದ್ದೇವೆ.
ಸೋಮವಾರ ಈ ಭಾಗದಲ್ಲಿ ಗುಡುಗು ಮತ್ತು ಗಾಳಿ ಸಹಿತ ಜೋರು ಮಳೆಯಾಯಿತು. ಇಲ್ಲೂ ಒಂದು ಮರ ಉರುಳಿ ಬಿದ್ದಿದ್ದರಿಂದ ನಿವಾಸಿಗಳಿಗೆ ಹಲವು ಸಮಸ್ಯೆಗಳು ಎದುರಾದವು. ಮರ ನೆಲದ ಮೇಲೆ ಉರುಳಿಲ್ಲ, ಅದು ಉರುಳಿದ್ದು ವಿದ್ಯುತ್ ಕಂಬದ ವೈರ್ಗಳ ಮೇಲೆ! ಅದರ ಭಾರಕ್ಕೆ ವಿದ್ಯುತ್ ಕಂಬವೊಂದು ನೆಲಕ್ಕೊರಗಿದೆ.
ಪ್ರದೇಶದಲ್ಲಿನ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ಮನೆಗಳ
ನಿವಾಸಿಗಳು ರಾತ್ರಿಯನ್ನು ವಿದ್ಯುತ್ ಪೂರೈಕೆಯಿಲ್ಲದೆ ಕಳೆದಿದ್ದಾರೆ. ಬೆಸ್ಕಾಂ ಕಚೇರಿಗೆ ಅವರು ಫೋನ್ ಮಾಡಿದಾಗಲೆಲ್ಲ ರಿಪೇರಿ ಕೆಲಸ ನಡೆದಿದೆ, ವಿದ್ಯುತ್ ಸರಬರಾಜು ಬೇಗ ಪುನರಾರಂಭಗೊಳ್ಳುತ್ತದೆ ಎಂಬ ಉತ್ತರ ಮಾತ್ರ ಸಿಕ್ಕಿತಂತೆ.
ಅದಕ್ಕೇ ನಾವು ಹೇಳಿದ್ದು, ಬೆಂಗಳೂರಲ್ಲಿ ಸುರಿಯುವ ಮಳೆ ಹರ್ಷದ ಜೊತೆ ಸಮಸ್ಯೆಗಳನ್ನೂ ಹೊತ್ತು ತರುತ್ತದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ; ಬೆಂಗಳೂರಿನಲ್ಲಿ ಮತ್ತೆ ಮುಂದುವರೆಯಲಿದೆ ವರುಣನ ಆರ್ಭಟ