ಯಾದಗಿರಿ: ಕುಡಿಯೋಕಷ್ಟೇ ಅಲ್ಲ, ಸ್ನಾನಕ್ಕೂ ಯೋಗ್ಯವಲ್ಲ ಭೀಮಾ ನದಿ ನೀರು!
ಭೀಮಾನದಿ ನೀರು ತೀವ್ರವಾಗಿ ಕಲುಷಿತಗೊಂಡಿರುವುದು ಬಯಲಾಗಿದೆ. ಈ ಬಗ್ಗೆ ಟಿವಿ9 ನಡೆಸಿದ ರಿಯಾಲಿಟಿ ಚೆಕ್ ನಡೆಸಿದ್ದು, ಯಾದಗಿರಿ ನಗರದ ಚರಂಡಿ ನೀರು ನೇರವಾಗಿ ಭೀಮಾನದಿಗೆ ಸೇರುತ್ತಿರುವುದು ಕಾಣಿಸಿದೆ. ನದಿ ನೀರು ಡಿ ದರ್ಜೆಗೆ ಇಳಿದಿದೆ. ಇದು ಕುಡಿಯಲು, ಸ್ನಾನಕ್ಕೂ ಯೋಗ್ಯವಲ್ಲ. ಆದರೂ ನಗರದ ಜನರಿಗೆ ಇದೇ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಯಾದಗಿರಿ, ನವೆಂಬರ್ 4: ಭೀಮಾನದಿಯ ನೀರು ತೀವ್ರವಾಗಿ ಕಲುಷಿತಗೊಂಡಿರುವುದು ‘ಟಿವಿ9’ ನಡೆಸಿದ ವಿಶೇಷ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗವಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರಕ್ಕೆ ಇತ್ತೀಚೆಗೆ ವರದಿ ಸಲ್ಲಿಸಿತ್ತು. ಇದರಲ್ಲಿ ಭೀಮಾನದಿಯ ನೀರು ಡಿ ದರ್ಜೆಗೆ ಇಳಿದಿದ್ದು, ಕುಡಿಯುವುದಕ್ಕಾಗಲಿ, ಸ್ನಾನಕ್ಕಾಗಲಿ ಅಥವಾ ಇನ್ನಾವುದೇ ಬಳಕೆಗೆ ಯೋಗ್ಯವಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟಿವಿ9 ರಿಯಾಲಿಟಿ ಚೆಕ್ ನಡೆಸಿದೆ.
ಯಾದಗಿರಿ ನಗರದ ಜನರಿಗೆ ಜೀವನದಿಯಾಗಿರುವ ಭೀಮಾನದಿಗೆ ನಗರದ ಕೊಳಚೆ ನೀರು ನೇರವಾಗಿ ಸೇರುತ್ತಿರುವುದು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಚರಂಡಿ ನೀರು ಹಳ್ಳಗಳ ಮೂಲಕ ಹರಿದು ನದಿಯನ್ನು ಸೇರುತ್ತಿದೆ. ಇದರಿಂದ ನದಿ ಸಂಪೂರ್ಣ ಕಲುಷಿತಗೊಂಡಿದ್ದರೂ, ಇದೇ ನೀರನ್ನು ಯಾದಗಿರಿ ನಗರದ ಜನರಿಗೆ ಕುಡಿಯಲು ಹಾಗೂ ನಿತ್ಯ ಬಳಕೆಗೆ ಸರಬರಾಜು ಮಾಡಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಭೀಮಾ ನದಿ ಸೇರುತ್ತಿವೆ ಮೃತದೇಹದ ಬಟ್ಟೆಗಳು!
ಭೀಮಾನದಿ ದಡದಲ್ಲಿರುವ ಸ್ಮಶಾನದಿಂದಲೂ ಮೃತದೇಹದ ಬಟ್ಟೆಗಳು ಹಾಗೂ ಇನ್ನಿತರ ವಸ್ತುಗಳನ್ನು ನದಿಗೆ ಎಸೆಯಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದರೂ, ಯಾದಗಿರಿ ಜನರು ಅನಿವಾರ್ಯವಾಗಿ ಕಲುಷಿತ ನೀರನ್ನೇ ಬಳಸುವ ಸ್ಥಿತಿ ಎದುರಾಗಿದೆ.
