ಭೀಮಾ vs ಕ್ಯಾಪ್ಟನ್: ಕಾಡಾನೆಗಳ ಕಾದಾಟದ ವಿಡಿಯೋ ವೈರಲ್
ಬೇಲೂರಿನ ಜಗಬೋರನಹಳ್ಳಿಯಲ್ಲಿ ಎರಡು ಕಾಡಾನೆಗಳ ನಡುವೆ ನಡೆದಿದ್ದ ರೋಚಕ ಕಾದಾಟದ ವಿಡಿಯೋ ಈಗ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೇಗವಾಗಿ ಹರಡುತ್ತಿದೆ. ಗ್ರಾಮಸ್ಥರು ಹಾಗೂ ಪ್ರಕೃತಿ ಪ್ರೇಮಿಗಳು ಈ ವಿಡಿಯೋವನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕಾಡಾನೆಗಳಾದ ಭೀಮಾ ಹಾಗೂ ಕ್ಯಾಪ್ಟನ್ ನಡುವಣ ಈ ಕಾಳಗದಲ್ಲಿ ಭಿಮಾ ಒಂದು ದಂತವನ್ನೇ ಕಳೆದುಕೊಂಡಿತ್ತು.
ಹಾಸನ, ಡಿಸೆಂಬರ್ 1: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಗಬೋರನಹಳ್ಳಿಯಲ್ಲಿ ಎರಡು ಮದಗಜಗಳ ನಡುವೆ ನಡೆದಿದ್ದ ಭೀಕರ ಕಾಳಗದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನವೆಂಬರ್ 9ರಂದು ಮದವೇರಿದ ಕಾಡಾನೆಗಳಾದ ಭೀಮಾ ಹಾಗೂ ಕ್ಯಾಪ್ಟನ್ ಪರಸ್ಪರ ಎದುರುಬಿದ್ದು ಬಿಗ್ ಫೈಟ್ ನಡೆಸಿದ್ದವು. ಮದವೇರಿದ ಎರಡೂ ಸಲಗಗಳು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತಾ ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದವು. ಪರಸ್ಪರ ಎದುರು ಬಂದಾಗ ಇಬ್ಬರೂ ಆನೆಗಳು ಭಾರೀ ಶಬ್ದ ಮಾಡುತ್ತಾ ದೀರ್ಘ ಕಾಲ ಕಾಳಗ ನಡೆಸಿಕೊಂಡಿದ್ದವು. ಆ ಕಾಳಗದಲ್ಲಿ ಕ್ಯಾಪ್ಟನ್ ಎದುರು ಸೋತ ಭೀಮಾ, ತನ್ನ ಒಂದು ದಂತವನ್ನೇ ಕಳೆದುಕೊಂಡಿತ್ತು. ಆದಾಗ್ಯೂ, ಗಾಯಗಳಿಂದ ಇದೀಗ ಚೇತರಿಸಿಕೊಂಡಿರುವ ಭೀಮಾ ಮತ್ತೆ ಕಾಡಿನಲ್ಲಿ ಸಾಮಾನ್ಯವಾಗಿ ಸಂಚರಿಸುತ್ತಿರುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.