ಮುಸ್ಕಾನ್ ತೋರಿದ ಧೈರ್ಯ ದೌರ್ಜನ್ಯಕ್ಕೊಳಗಾದ ಎಲ್ಲ ಮಹಿಳೆಯರಿಗೆ ಹೋರಾಡುವ ಪ್ರೇರಣೆಯಾಗಿದೆ: ಮಹಾರಾಷ್ಟ್ರ ಶಾಸಕ ಸಿದ್ದಿಖ್
ಮುಸ್ಕಾನ್ಗೆ ಉಡುಗೊರೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಸಿದ್ದಿಖ್ ಅವರು, ‘ನಮ್ಮ ಸಮುದಾಯದ ಸಹೋದರಿಯೊಬ್ಬಳು ಒಂದಷ್ಟು ಪುಂಡರ ಎದುರು ತೋರಿದ ಧೈರ್ಯವನ್ನು ನೋಡಿದ ನಂತರ ಆಕೆಯನ್ನು ಭೇಟಿಯಾಗಲೇ ಬೇಕು ಅಂತ ನಿಶ್ಚಯಿಸಿಕೊಂಡು ಅಷ್ಟು ದೂರದಿಂದ ಇಲ್ಲಿಗೆ ಬಂದಿದ್ದೇನೆ ಎಂದರು.
ಮಂಡ್ಯದ ಪಿಈಎಸ್ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್ (Muskan Khan) ಹೆಸರು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ವಿದ್ಯಾರ್ಥಿನಿಯ ವಿಡಿಯೋ ವೈರಲ್ ಅಗಿದ್ದು ನಮಗೆಲ್ಲ ಗೊತ್ತಿರುವ ಸಂಗತಿಯೇ. ಮುಸ್ಕಾನ್ ತೋರಿದ ಧೈರ್ಯವನ್ನು ಎಲ್ಲೆಡೆ ಶ್ಲಾಘಿಸಲಾಗುತ್ತಿದೆ. ಮಹಾರಾಷ್ಟ್ರದ (Maharashtra) ಕಾಂಗ್ರೆಸ್ ಶಾಸಕ ಜೀಷನ್ ಸಿದ್ದಿಖ್ (Jeeshan Siddique) ಈಕೆಯ ದೈರ್ಯದಿಂದ ಅದೆಷ್ಟು ಪ್ರಭಾವಿತರಾಗಿದ್ದಾರೆಂದರೆ, ಗುರುವಾರ ಅವರು ಮುಂಬೈನಿಂದ ಮಂಡ್ಯಗೆ ಬಂದು ಮುಸ್ಕಾನ್ ಮತ್ತು ಆಕೆಯ ಕುಟುಂಬವನ್ನು ಭೇಟಿ ಮಾಡಿ ಯಾವುದಕ್ಕೂ ಹೆದರುವ ಅವಶ್ಯಕತೆಯಿಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಅಂತ ಧೈರ್ಯ ತುಂಬಿದರಲ್ಲದೆ ಮುಸ್ಕಾನ್ಗೆ ಒಂದು ಐಪೋನ್ (iPhone) ಮತ್ತು ಸ್ಮಾರ್ಟ್ ವಾಚೊಂದನ್ನು (smart watch) ಉಡುಗೊರೆಯಾಗಿ ನೀಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಗೋವಾನಲ್ಲಿ ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ಅವರು ಬೆಂಗಳೂರಿನಲ್ಲಿ ಇಳಿದು ಕಾರೊಂದರಲ್ಲಿ ಮಂಡ್ಯಗೆ ಬಂದಿದ್ದರು.
ಮುಸ್ಕಾನ್ ಬುರ್ಖಾ ಧರಿಸಿ ಕಾಲೇಜಿಗೆ ಬಂದಾಗ ಕೇಸರಿ ಶಾಲು ಹೊದ್ದ ಕೆಲ ಯುವಕರ ಗುಂಪು ಜೈ ಶ್ರೀರಾಮ್ ಜೈ ಶ್ರೀರಾಮ್ ಅಂತ ಕೂಗುತ್ತಾ ಆಕೆಯನ್ನು ಹಿಂಬಾಲಿಸುತ್ತದೆ ಮತ್ತು ಕಾಲೇಜಿನ ಆವರಣದಲ್ಲಿ ಆಕೆಯನ್ನು ಅಡ್ಡಗಟ್ಟುವ ಪ್ರಯತ್ನ ಮಾಡುತ್ತದೆ. ಆಗ ಮುಸ್ಕಾನ್ ಅವರೆಡೆ ತಿರುಗು ಅಲ್ಲಾಹ್ ಹು ಅಕ್ಬರ್ ಅಂತ ಕೂಗುತ್ತಾಳೆ. ಇಡೀ ಸನ್ನಿವೇಶವನ್ನು ಹಲವಾರು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್ ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ಅದು ವೈರಲ್ ಅಗಿದೆ.
ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಅಧ್ಯಾಪಕ ವರ್ಗ ಕೂಡಲೇ ಮುಸ್ಕಾನ್ ನೆರವಿಗೆ ಧಾವಿಸಿದ್ದಾರೆ. ಪ್ರಿನ್ಸಿಪಾಲ್ ಹೇಳುವ ಪ್ರಕಾರ ಯುವಕರ ಗುಂಪಿನ ಸದಸ್ಯರಲ್ಲಿ ಯಾರೊಬ್ಬರೂ ಅವರ ಕಾಲೇಜಿನ ವಿದ್ಯಾರ್ಥಿಯಲ್ಲ. ಅನೇಕ ಮುಸ್ಲಿಂ ಸಂಘ ಸಂಸ್ಥೆಗಳು ಆಕೆಯ ಧೈರ್ಯವನ್ನು ಮೆಚ್ಚಿ ಹಣದ ರೂಪದಲ್ಲೂ ಉಡುಗೊರೆ ನೀಡುತ್ತಿವೆ.
ಮುಸ್ಕಾನ್ಗೆ ಉಡುಗೊರೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಸಿದ್ದಿಖ್ ಅವರು, ‘ನಮ್ಮ ಸಮುದಾಯದ ಸಹೋದರಿಯೊಬ್ಬಳು ಒಂದಷ್ಟು ಪುಂಡರ ಎದುರು ತೋರಿದ ಧೈರ್ಯವನ್ನು ನೋಡಿದ ನಂತರ ಆಕೆಯನ್ನು ಭೇಟಿಯಾಗಲೇ ಬೇಕು ಅಂತ ನಿಶ್ಚಯಿಸಿಕೊಂಡು ಅಷ್ಟು ದೂರದಿಂದ ಇಲ್ಲಿಗೆ ಬಂದಿದ್ದೇನೆ. ಮುಸ್ಕಾನ್ ಪ್ರದರ್ಶಿಸಿದ ದೈರ್ಯವನ್ನು ಕೇವಲ ಕರ್ನಾಟಕ ಮತ್ತು ಭಾರತದಲ್ಲಿ ಮಾತ್ರ ಅಲ್ಲ ಇಡೀ ವಿಶ್ವದಲ್ಲಿ ಕೊಂಡಾಡಲಾಗುತ್ತಿದೆ. ಆಕೆ ತೋರಿದ ದೈರ್ಯವು ಶೋಷಣೆ ಮತ್ತು ದೌರ್ಜನ್ಯಕ್ಕೊಳಗಾದ ಅಸಂಖ್ಯಾತ ಮಹಿಳೆಯರಿಗೆ ಹೋರಾಡಲು ಪ್ರೇರಣೆ ನೀಡುತ್ತದೆ,’ ಎಂದು ಹೇಳಿದರು.
‘ಹಿಜಾಬ್ ಧರಿಸುವುದು ಆಕೆಯ ಸಂವಿಧಾನಾತ್ಮಕ ಹಕ್ಕು ಅಗಿದೆ. ಅದನ್ನು ಯಾರೂ ಕಸಿದುಕೊಳ್ಳುವಂತಿಲ್ಲ. ನನ್ನಂಥ ಲಕ್ಷಾಂತರ ಸಹೋದರರು ಮುಸ್ಕಾನ್ ಜೊತೆ ಇದ್ದಾರೆ. ಈ ಜನರಿಗೆ ಸಮಸ್ಯೆ ಯಾವುದರಿಂದ ಇದೆ? ಹಿಜಾಬ್ ಧರಿಸುವುದರಿಂದಲೋ ಅಥವಾ ಸಮುದಾಯದ ಮಹಿಳೆಯರು ವಿದ್ಯಾವಂತರಾಗುತ್ತಿದ್ದಾರೆ ಅಂತಲೋ? ಅಸಲಿಗೆ ಇದು ವಿವಾದವೇ ಅಲ್ಲ. ವಿವಾದ ಸೃಷ್ಟಿಸಿದ ಹೇಡಿಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಿದ್ದಿಖ್ ಹೇಳಿದರು.
‘ನಮ್ಮದು ಒಂದು ಪ್ರಜಾಪ್ರಭುತ್ವ ದೇಶವಾಗಿದೆ. ಇಲ್ಲಿ ನಿಮಗೆ ಸರಿಯೆನಿಸುವ ಬಟ್ಟೆಗಳನ್ನು ತೊಡಬಹುದು. ನಿಮ್ಮ ಹಕ್ಕನ್ನು ಯಾರೂ ಪ್ರಶ್ನಿಸಲಾರರು. ಮುಸ್ಕಾನ್ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಅವರೊಂದಿಗೆ ಮಾತಾಡಿ ತುಂಬಾ ಸಂತೋಷವಾಗಿದೆ,’ ಎಂದು ಸಿದ್ದಿಖ್ ಹೇಳಿದರು.
ಇದನ್ನೂ ಓದಿ: ಹಿಜಾಬ್- ಕೇಸರಿ ಶಾಲು ವಿವಾದ ಹಿನ್ನೆಲೆ; ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರ ಪಥಸಂಚಲನ