ಮದುಮಗಳ ಬಾಳಲ್ಲಿ ಘೋರ ದುರಂತ: ನಾಳೆ ಹಸೆಮಣೆ ಏರಬೇಕಿದ್ದ ಯುವತಿ ಮಸಣಕ್ಕೆ

Updated on: Oct 30, 2025 | 7:41 PM

ಬದುಕಿನ ಬಗ್ಗೆ ನೂರಾರು ಕನಸು ಹೊತ್ತು ಇನ್ನೇನು ಸಪ್ತಪದಿ ತುಳಿಯಬೇಕಿದ್ದ ಯುವತಿ ದುರಂತ ಅಂತ್ಯಕಂಡಿದ್ದಾಳೆ. ಹೌದು.. ಮದುವೆಯಾಗಿ ಗಂಡನ ಜೊತೆ ಸುಂದ ಸಂಸಾರದ ಬಂಡಿ ಸಾಗಿಸುವ ಮೊದಲೇ ಯುವತಿ ಸಾವನ್ನಪ್ಪಿದ್ದಾಳೆ. ಈ ಮೂಲಕ ನಾಳೆ ಬೆಳಗ್ಗೆ ಹಸಮಣೆ ಮೇಲೆ ಕುಳಿತುಕೊಳ್ಳಬೇಕಿದ್ದ ಯುವತಿ ಇಂದು ಮಸಣ ಸೇರಿದ್ದಾಳೆ. ಸಂಗಾತಿ ಆಗಬೇಕಿದ್ದವಳಿಗೆ ವರ ಹಾಗೂ ಆಕೆಯ ಕುಟುಂಬಸ್ಥರು ಭಾರದ ಮನಸ್ಸಿನಿಂದ ವಿದಾಯ ಹೇಳಿದ್ದು, ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ನೀರವ ಮೌನ ಆವರಿಸಿದೆ.

ಚಿಕ್ಕಮಗಳೂರು, (ಅಕ್ಟೋಬರ್ 30): ನೂರಾರು ಕನಸುಗಳನ್ನು ಹೊತ್ತು ಯುವತಿಯೋರ್ವಳು ಮದುವೆ ಅಣಿಯಾಗಿದ್ದಳು. ಇನ್ನೇನು ನಾಳೆಯೇ (ಅಕ್ಟೋಬರ್ 31) ಯುವತಿ ಹಸೆಮಣೆ ಏರಬೇಕಿತ್ತು. ಹೀಗಾಗಿ ಎರಡೂ ಮನೆಯುವರು ಮದುವೆಗೆ ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದ್ರೆ, ಮದುವೆ ಒಂದು ದಿನ ಮೊದಲೇ ಯುವತಿ ದುರಂತ ಸಾವು ಕಂಡಿದ್ದಾಳೆ. ನಾಳೆ ಬೆಳಗಾಗುವಷ್ಟರಲ್ಲಿ ಹಸಮಣೆ ಮೇಲೆ ಕುಳಿತು ತಾಳಿ ಕಟ್ಟಿಸಿಕೊಳ್ಳಬೇಕಿದ್ದ ಶೃತಿ(32) ಇಂದು (ಅಕ್ಟೋಬರ್ 30) ಹೃದಯಘಾತದಿಂದ ಸಾವನ್ನಪ್ಪಿದ್ದಾಳೆ. ಈ ಹೃದಯವಿದ್ರಾವಕ ಘಟನೆ  ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದ್ದು, ಮಗಳ ಬದುಕಿನ ಬಗ್ಗೆ ಬೆಟ್ಟದಷ್ಟು ಕನಸು ಹೊತ್ತಿದ್ದ ತಂದೆ- ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ನಾಳೆ ಸಪ್ತಪದಿ ತುಳಿಯಬೇಕಿದ್ದ ಮದುಮಗಳು ಶೃತಿ(32) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು, ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಇದರಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಆವರಿಸಿದೆ. ಇನ್ನು ಶೃತಿ ಅವರ ಸಾವು ಸುತ್ತಮುತ್ತಲಿನ ಗ್ರಾಮದ ಜನರನ್ನು ಆಘಾತಕ್ಕೀಡು ಮಾಡಿದ್ದು, ಎಲ್ಲರು ಮಮ್ಮಲ ಮರುಗಿದ್ದಾರೆ.