ಚುನಾವಣಾ ಪ್ರಚಾರಕ್ಕೆ ಬಸನಗೌಡ ಯತ್ನಾಳ್ಗೆ ಸ್ವಾಗತ ಎಂದರೇ ಬಿಎಸ್ ಯಡಿಯೂರಪ್ಪ!
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಾಗಲಕೋಟೆ ಉಪಚುನಾವಣೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಬಂದರೆ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನಹಿತ ಮರೆತಿದೆ ಎಂದು ಆರೋಪಿಸಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು, ಮಾರ್ಚ್ 31: ಮುಂಬರುವ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಉಪಚುನಾವಣೆ ಕುರಿತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಿದ್ದು, ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಬಂದರೆ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ಶ್ರೀನಿವಾಸ್ ದಾಸ್ ಕರಿಯಪ್ಪ ಪರವಾಗಿ ಮತ್ತು ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಅವರು ಮಾತನಾಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಭಾರಿ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಪ್ರಸ್ತುತ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಹಿತವನ್ನು ಸಂಪೂರ್ಣವಾಗಿ ಮರೆತು ‘ತುಘಲಕ್ ದರ್ಬಾರ್’ ನಡೆಸುತ್ತಿದೆ ಎಂದು ಟೀಕಿಸಿದರು. ಮತ್ತೊಮ್ಮೆ ಕಾಂಗ್ರೆಸ್ ಗೆದ್ದರೆ ಅದು ಭ್ರಷ್ಟಾಚಾರಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದ ಅವರು, ಎರಡೂ ಕ್ಷೇತ್ರದ ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಆ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
