Bengaluru Kambala: ಕೋಣ ತಾಟೆ ಕಂಬಳದಲ್ಲಿ ಒಂದು ಕೇಜಿಗೂ ಹೆಚ್ಚು ತೂಕದ ಚಿನ್ನದ ಪದಕ ಗೆದ್ದಿದೆ ಅಂದರೆ ನಂಬ್ತೀರಾ?

|

Updated on: Nov 24, 2023 | 6:53 PM

ಕೋಣಗಳು ಆಗಾಧ ಶಕ್ತಿವಂತ ಪ್ರಾಣಿಗಳು ಅನ್ನೋದರ ಬಗ್ಗೆ ಸಂಶಯ ಬೇಡ. ಕೋಣಗಳ ಶಕ್ತಿ ಸಾಮರ್ಥ್ಯಗಳನ್ನು ನೋಡಿಯೇ ಪಾಶವೀ ಶಕ್ತಿ ಎಂಬ ಪದ ಹುಟ್ಟಿರಬೇಕು. ತಾಟೆಗೆ ಈಗ ವಯಸ್ಸಾಗಿದ್ದರೂ ಅದರ ಸಾಮರ್ಥ್ಯ ಮತ್ತು ಕ್ಷಮತೆ ನಶಿಸಿಲ್ಲ ಎಂದು ಆದನ್ನು ಈಗ ಸಾಕುತ್ತಿರುವವರು ಹೇಳುತ್ತಾರೆ. ಕೋಣಗಳನ್ನು ಮಕ್ಕಳ ಹಾಗೆ ನೋಡಿಕೊಳ್ಳಬೇಕು ಮತ್ತು ವಯಸ್ಸಾಗುವಾಗ ಅವುಗಳ ಆಹಾರದ ಬಗ್ಗೆ ಹೆಚ್ಚಿನ ಗಮನವಹಿಸಬೇಕೆಂದು ಅವರು ಹೇಳುತ್ತಾರೆ.

ಬೆಂಗಳೂರು: ಇಲ್ಲಿ ಕಾಣುತ್ತಿರುವ ಕೋಣ (buffalo) ಸಾಮಾನ್ಯವಾದುದಲ್ಲ. ತಾಟೆ ಹೆಸರಿನ ಇದನ್ನು ಕಂಬಳ ಕ್ರೀಡೆಯ ವಿರಾಟ್ ಕೊಹ್ಲಿ (Virat Kohli) ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಸೋಲಿಲ್ಲದ ಸರದಾರ, ಚಾಂಪಿಯನ್ ಆಫ್ ಚಾಂಪಿಯನ್ಸ್ ಅಂತ ಕರೆದರೂ ಆದೀತು. ಯಾಕೆ ಗೊತ್ತಾ? ಇದು ಕಂಬಳ ಸ್ಪರ್ಧೆಗಳಲ್ಲಿ ತನ್ನನ್ನು ಸಾಕಿದ ಯಜಮಾನನಿಗೆ ಒಂದು ಕೆಜಿಗಿಂತ ಹೆಚ್ಚು ಚಿನ್ನ ಗೆದ್ದುಕೊಟ್ಟಿದೆಯಂತೆ! ಖ್ಯಾತ ಕಂಬಳ ಜಾಕಿ ಶ್ರೀನಿವಾಸ ಗೌಡ (Srinivas Gowda) ನಿಮಗೆ ಗೊತ್ತಲ್ಲ? ಕಂಬಳಗದ್ದೆಯಲ್ಲಿ ಇವರು; 100 ಮತ್ತು 200 ಮೀಟರ್ ಒಟಗಳಲ್ಲಿ ವಿಶ್ವದಾಖಲೆ ಹೊಂದಿರುವ ಜಮೈಕಾದ ಉಸೇನ್ ಬೋಲ್ಟ್ ಗಿಂತ (Usain Bolt) ವೇಗವಾಗಿ ಓಡುತ್ತಾರೆ. ಅದೇ ಶ್ರೀನಿವಾಸ ಗೌಡರು ತಾಟೆಯನ್ನು ಹಲವಾರು ಕಂಬಳ ಸ್ಪರ್ಧೆಗಳಲ್ಲಿ ಓಡಿಸಿ ಚಿನ್ನದ ಪದಕ ಗೆದ್ದಿದ್ದಾರೆ.  ನಗರದಲ್ಲಿ ಮೊದಲಬಾರಿಗೆ ನಾಳೆಯಿಂದ ನಡೆಯಲಿರುವ ಬೆಂಗಳೂರು ಕಂಬಳದಲ್ಲಿ ತಾಟೆ  ಓಡಲಿದ್ದು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಲಿದೆ. ಈಗ ಅದು ತಲೆಗೆ ಕೆಂಪು ರುಮಾಲು ಸುತ್ತಿರುವವರ ಕೊಟ್ಟಿಗೆಗೆ ಬಂದಿದ್ದು ಅದರೊಂದಿಗೆ ಅವರಿಗೆ ಇದು ಮೊದಲ ಸ್ಪರ್ಧೆ.  ಪದಕ ಗೆಲ್ಲುವ ಆತ್ಮವಿಶ್ವಾಸ  ತುಂಬಿ ಅವರಲ್ಲಿ ತುಳುಕುತ್ತಿದೆ ಯಾಕೆಂದರೆ ತಾಟೆ ಇದುವರೆಗೆ ಯಾರನನ್ನೂ ನಿರಾಶೆಗೊಳಿಸಿಲ್ಲ ಅಂತ ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ