Viral Video: ಅಮಾನವೀಯ.. ಮೂಕ ಪ್ರಾಣಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ಕೊನೆಗೆ ಏನಾಯ್ತು?

| Updated By: ಸಾಧು ಶ್ರೀನಾಥ್​

Updated on: Dec 14, 2023 | 2:53 PM

ತೋಟದ ಮಾಲೀಕ ಸರ್ದಾರ್ ಕೂಡ ಬೆಳೆ ನಷ್ಟವಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಗೆ ನ್ಯಾಯ ಸಿಗುವವರೆಗೂ ಗೂಳಿಯನ್ನು ಬಿಡುವುದಿಲ್ಲ ಎಂದು ತೋಟದ ಮಾಲೀಕ ಸರ್ದಾರ್ ಪೊಲೀಸ್ ಠಾಣೆಯಲ್ಲಿ ಗೂಳಿಯನ್ನು ಕಟ್ಟಿಹಾಕಿದ್ದಾರೆ. ಗೂಳಿ ಪಂಚಾಯತಿಯನ್ನು ಇತ್ಯರ್ಥಪಡಿಸಲು ಸಾಧ್ಯವಾಗದ ಪೊಲೀಸ್ ಸಿಬ್ಬಂದಿ ಗೂಳಿ ಮಾಲೀಕನನ್ನೂ ಠಾಣೆಗೆ ಕರೆಸಿದ್ದಾರೆ.

ಮಾನವೀಯತೆ ಮಣ್ಣುಪಾಲಾಗಿದೆ.. ಮಾತು ಬರುವ ಮನುಷ್ಯ ತಪ್ಪುಗಳನ್ನು ಮಾಡುತ್ತಿದ್ದರೆ, ಮಾತನಾಡಲು ಆಗದ ಮೂಕ ಜೀವಿಗಳು ತಪ್ಪು ಮಾಡುತ್ತಿವೆ ಎಂದು ಅವುಗಳನ್ನು ಬಂಧಿಸಿ, ಸಾಯುವ ಹಾಗೆ ಹೊಡೆದು ಬಡಿದು ಪೊಲೀಸ್ ಠಾಣೆಗೆ ಎಳೆದೊಯ್ದು ಒಪ್ಪಿಸಿದ್ದಾರೆ. ಮಂಚಿರ್ಯಾಲ ಜಿಲ್ಲೆ ಚೆನ್ನೂರು ಪಟ್ಟಣದ ಎಂಎಲ್ ಎ ಕಾಲೋನಿಯ ಅಟ್ಟೆಂ ಮಧು ಎಂಬುವವರಿಗೆ ಸೇರಿದ ಗೂಳಿಯೊಂದು ಕಟ್ಟೇರಸಾಲ ಗ್ರಾಮದಲ್ಲಿದ್ದ ತೋಟದಲ್ಲಿ ಬೆಳೆ ಮೇಯುತ್ತಿತ್ತು.

ಆ ಬೆಳೆಯ ಮಾಲೀಕ ಸರ್ಧಾರ್ ಗೂಳಿಯನ್ನು ಕಟ್ಟಿಹಾಕಿ ಹೊಡೆದು ಬಡಿದೂ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ ತನ್ನ ಮನೆಯಲ್ಲಿಯೇ ಕಟ್ಟಿಹಾಕಿದ್ದಾನೆ. ಈ ವಿಷಯ ತಿಳಿದ ಗೂಳಿಯ ಮಾಲೀಕ ಮಧು ಅವರು ಸರ್ದಾರ್ ಜೊತೆ ಜಗಳವಾಡಿದ್ದಾನೆ. ಮೂಕ ಜೀವಿಯನ್ನು ಹೇಗೆ ಹೊಡೆದು ಬಡಿದೂ ಮಾಡಿದ್ದೀಯಾ? ಅದನ್ನು ಹೇಗೆ ಕಟ್ಟಿಹಾಕಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆ ಹಾನಿ ಮಾಡಿದ ಗೂಳಿಗೆ ಹೊಡೆದು ಕಟ್ಟಿಹಾಕದೆ ಅದಕ್ಕೆನು ಮುತ್ತು ಕೊಟ್ಟು ಮುದ್ದಾಡಬೇಕಾ? ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಅನ್ಯಅ ಮಾರ್ಗವಿಲ್ಲದೆ ಗೂಳಿಯನ್ನು ಬಿಡಿಸಿಕೊಳ್ಳಲು ಗೂಳಿ ಮಾಲೀಕ ಮಧು ಪೊಲೀಸರ ಮೊರೆ ಹೋಗಿದ್ದಾನೆ.

ಈ ಮಧ್ಯೆ, ತೋಟದ ಮಾಲೀಕ ಸರ್ದಾರ್ ಕೂಡ ಬೆಳೆ ನಷ್ಟವಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಗೆ ನ್ಯಾಯ ಸಿಗುವವರೆಗೂ ಗೂಳಿಯನ್ನು ಬಿಡುವುದಿಲ್ಲ ಎಂದು ತೋಟದ ಮಾಲೀಕ ಸರ್ದಾರ್ ಪೊಲೀಸ್ ಠಾಣೆಯಲ್ಲಿ ಗೂಳಿಯನ್ನು ಕಟ್ಟಿಹಾಕಿದ್ದಾರೆ. ಗೂಳಿ ಪಂಚಾಯತಿಯನ್ನು ಇತ್ಯರ್ಥಪಡಿಸಲು ಸಾಧ್ಯವಾಗದ ಪೊಲೀಸ್ ಸಿಬ್ಬಂದಿ ಗೂಳಿ ಮಾಲೀಕನನ್ನೂ ಠಾಣೆಗೆ ಕರೆಸಿದ್ದಾರೆ. ಆದರೆ ಪೊಲೀಸ್ ಠಾಣೆಯಲ್ಲಿ ಗೂಳಿಯನ್ನು ಕಟ್ಟಿ ಹಾಕಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಗೂಳಿಯನ್ನು ಹೇಗೆ ಬಂಧಿಸಿದಿರಿ ಎಂದು ಸ್ಥಳೀಯರು ಗಲಾಟೆ ಮಾಡುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ತಡರಾತ್ರಿ ಗೂಳಿಯನ್ನು ಮಾಲೀಕ ಮಧುಗೆ ಒಪ್ಪಿಸಿದ್ದಾರೆ. ಇಬ್ಬರ ದೂರುಗಳನ್ನು ಸ್ವೀಕರಿಸಿದ ಪೊಲೀಸರು ಹಿರಿಯರ ಸಮ್ಮುಖದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.