ರೈತರ ಸಾಲ ಮಾಡಲು ನನ್ನಲ್ಲಿ ನೋಟು ಪ್ರಿಂಟ್ ಮಾಡುವ ಮಶೀನ್ ಇದೆಯಾ ಅಂತ ಯಡಿಯೂರಪ್ಪ ಹೇಳಿದ್ದು ದಾಖಲೆಯಲ್ಲಿದೆ: ಸಿದ್ದರಾಮಯ್ಯ
ತಾನು ಹಿಂದೆ ವಿಧಾನ ಸಭೆಯಲ್ಲಿ ಹೇಳಿದ ಹಾಗೆ ಅಸಲು ಕಟ್ಟಿರುವ ರೈತರ ಬಡ್ಡಿ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ತಾನು ನೇಕಾರರ ರೂ. 50,000 ಮೊತ್ತದವರೆಗಿನ ಸಾಲಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯವರು (Siddaramaiah) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮೇಲೆ ವಾಗ್ದಾಳಿ ನಡೆಸಿ ಬೇಜವಾಬ್ದಾರಿ ಜನ ಎಂದರು. ವಿಜಯೇಂದ್ರ ಸಾಲಮನ್ನಾ ಮಾಡಬೇಕೆಂದು ಹೇಳಿದ್ದನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, 2009ರಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಲ್ಲಿದ್ದಾಗ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ವಿಎಸ್ ಉಗ್ರಪ್ಪ ರೈತರ ಸಾಲಮನ್ನಾ ಮಾಡಬೇಕೆಂದು ಹೇಳಿದ ಮಾತಿಗೆ ಉರಿದು ಬಿದ್ದು, ವಿರೋಧ ಪಕ್ಷದಲ್ಲಿದ್ದಾಗ ತಾನು ಹಾಗೆ ಹೇಳಿರಬಹುದು, ಹಾಗಂದ ಮಾತ್ರಕ್ಕೆ ಸಾಲಮನ್ನಾ ಮಾಡೋದಿಕ್ಕೆ ತಾನೇನು ನೋಟು ಮುದ್ರಿಸುವ ಮಶೀನ್ ಇಟ್ಕೊಂಡಿದ್ದೀನಾ ಅಂತ ಹೇಳಿದ್ದರು. ಡಿಸೆಂಬರ್ 9, 2009 ರಂದು ಯಡಿಯೂರಪ್ಪ ಆಡಿದ ಮಾತು ವಿಧಾನ ಪರಿಷತ್ ದಾಖಲೆಯಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ವಿಜಯೇಂದ್ರರಿಗೆ ಹಿಂದೆ ಮುಂದೆ ನಡೆದಿದ್ದ ಯಾವುದೂ ಗೊತ್ತಿಲ್ಲ, ಅವರ ತಂದೆ ಆಡಿದ ಮಾತೇ ಗೊತ್ತಿಲ್ಲ ಅಂತ ಸಿದ್ದರಾಮಯ್ಯ ಲೇವಡಿ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ