ಬೆಂಗಳೂರು ಏರ್​​ಪೋರ್ಟ್​​: ಹೊಸ ಪಾರ್ಕಿಂಗ್​​ ರೂಲ್ಸ್​​ಗೆ ಕ್ಯಾಬ್​​ ಚಾಲಕರ ವಿರೋಧ

Updated By: ಪ್ರಸನ್ನ ಹೆಗಡೆ

Updated on: Dec 03, 2025 | 1:33 PM

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 8ರಿಂದ ಹೊಸ ಪಾರ್ಕಿಂಗ್ ನಿಯಮಗಳು ಜಾರಿಗೆ ಬರಲಿವೆ. ಸೈಡ್ ಪಿಕಪ್ ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುವುದು ಇದರ ಉದ್ದೇಶ. ಎಲ್ಲೋ ಬೋರ್ಡ್ ಟ್ಯಾಕ್ಸಿಗಳಿಗೆ ಆಗಮನ ದ್ವಾರ ನಿಷೇಧಿಸಿ, P3 ಮತ್ತು P4 ಪಾರ್ಕಿಂಗ್‌ಗೆ ಸೂಚಿಸಲಾಗಿದೆ. ಆದರೆ, ಈ ಹೊಸ ನಿಯಮಗಳಿಗೆ ಚಾಲಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ದೇವನಹಳ್ಳಿ, ಡಿಸೆಂಬರ್​​ 03: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAL) ಸೈಡ್ ಪಿಕಪ್ ಹಾವಳಿ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಡಿಸೆಂಬರ್ 8ರಿಂದ ಹೊಸ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಹೊಸ ನಿಯಮಗಳ ಪ್ರಕಾರ, ಎಲ್ಲೋ ಬೋರ್ಡ್ ಟ್ಯಾಕ್ಸಿಗಳಿಗೆ ಆಗಮನ ಗೇಟ್‌ನಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಈ ಟ್ಯಾಕ್ಸಿಗಳು P3 ಮತ್ತು P4 ಪಾರ್ಕಿಂಗ್ ಪ್ರದೇಶಗಳಲ್ಲಿ ನಿಲ್ಲಬೇಕಾಗುತ್ತದೆ. ವೈಟ್ ಬೋರ್ಡ್ ವಾಹನಗಳಿಗೆ ಮಾತ್ರ ಆಗಮನ ಗೇಟ್‌ನಲ್ಲಿ ಪ್ರವೇಶವಿರುತ್ತದೆ. ಇಲ್ಲಿ ಸ್ವಯಂಚಾಲಿತ ಟಿಕೆಟ್ ಯಂತ್ರಗಳನ್ನು ಅಳವಡಿಸಲಾಗಿದ್ದು, 8 ನಿಮಿಷಗಳವರೆಗೆ ಉಚಿತ ಪಾರ್ಕಿಂಗ್ ನೀಡಲಾಗುತ್ತದೆ. 8 ರಿಂದ 13 ನಿಮಿಷಗಳವರೆಗೆ 150 ರೂಪಾಯಿ, 13 ರಿಂದ 18 ನಿಮಿಷಗಳವರೆಗೆ 300 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಗಳಿಗಿಂತ ಹೆಚ್ಚು ನಿಲುಗಡೆಯಾದರೆ ವಾಹನವನ್ನು ಟೋ ಮಾಡಿ ಪೊಲೀಸರ ವಶಕ್ಕೆ ನೀಡಲಾಗುತ್ತದೆ. ವಿಮಾನ ನಿಲ್ದಾಣದ ಆಡಳಿತ ಮಂಡಳಿಯ ಈ ಕ್ರಮಕ್ಕೆ ಟ್ಯಾಕ್ಸಿ ಚಾಲಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೊಸ ನಿಯಮಗಳು ತಮ್ಮ ಜೀವನೋಪಾಯಕ್ಕೆ ಧಕ್ಕೆ ತರುತ್ತವೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.