ರಣ ಬಿಸಿಲಿಗೆ ಬಲಿಯಾದ ಕಾಡಾನೆ: 17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು!
ರಾಜ್ಯದಲ್ಲಿ ತೀವ್ರ ಬಿಸಿಲಿನ ತಾಪದಿಂದ ಚಾಮರಾಜನಗರದ ಹನೂರು ತಾಲೂಕಿನಲ್ಲಿ ನೀರು ಅರಸಿ ಬಂದ ಮೂರು ಕಾಡಾನೆಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದವು. ರಕ್ಷಣಾ ಕಾರ್ಯಾಚರಣೆಯ ನಂತರ ಎರಡು ಆನೆಗಳನ್ನು ರಕ್ಷಿಸಲಾಯಿತು, ಆದರೆ 25 ವರ್ಷ ಪ್ರಾಯದ ಹೆಣ್ಣಾನೆ ನಿರ್ಜಲೀಕರಣ ಮತ್ತು ಬಳಲಿಕೆಯಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಇದು ಬಿಸಿಲಿನ ತಾಪ ಪ್ರಾಣಿಗಳ ಮೇಲೂ ಬೀರುವ ಭೀಕರ ಪರಿಣಾಮವನ್ನು ತೋರಿಸುತ್ತದೆ.
ಚಾಮರಾಜನಗರ, ಏ. 23: ರಾಜ್ಯದಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗುತ್ತಿದೆ. ಈ ಬಿಸಿಯನ್ನು ಮನುಷ್ಯರಿಗೂ ತಡೆಯಲಾಗುತ್ತಿಲ್ಲ. ಇನ್ನು ಪಾಪ ಮೂಕ ಪ್ರಾಣಿಗಳಿಗೆ ತಡೆದುಕೊಳ್ಳಲು ಹೇಗೆ ಸಾಧ್ಯ. ಪ್ರಾಣಿಗಳಿಗೆ ಮನುಷ್ಯರಿಗಿಂತ ಬಾಯರಿಕೆ ಹೆಚ್ಚು. ಹಾಗಾಗಿ ದೊಡ್ಡ ನದಿ, ಕರೆಗಳನ್ನು ಅರಸಿಕೊಂಡು ಬರುತ್ತದೆ. ಅದರಲ್ಲೂ ದೈತ್ಯ ಗಾತ್ರದ ಪ್ರಾಣಿಯಾಗಿರುವ ಆನೆಗಳಿಗೆ ನೀರು ಹೆಚ್ಚುಬೇಕು. ಇದೀಗ ಇಲ್ಲೊಂದು ಆನೆ ನೀರು ಕಡಿಯಲು ಬಂದು ಪ್ರಾಣ ಕಳೆದುಕೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನೀರು ಅರಸಿ ಬಂದು ಉಡುತೊರೆ ಹಳ್ಳದ ಕೆಸರಿನಲ್ಲಿ ಮೂರು ಕಾಡಾನೆಗಳು ಸಿಲುಕಿಕೊಂಡಿತ್ತು. ಇದರ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಒಂದು ಹೆಣ್ಣಾನೆ ಚಿಕಿತ್ಸೆ ಫಲಿಸದೆ ನಿನ್ನೆ ತಡರಾತ್ರಿ ಸಾವನ್ನಪ್ಪಿದೆ. ಕಳೆದ ಎರಡು ದಿನಗಳ ಹಿಂದೆ, ತೀವ್ರ ಬಿಸಿಲಿನಿಂದ ಬಸವಳಿದಿದ್ದ ಐದು ಆನೆಗಳ ಹಿಂಡು ನೀರು ಕುಡಿಯಲು ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯ ಉಡುತೊರೆ ಹಳ್ಳದ ಹಿನ್ನೀರಿಗೆ ಬಂದಿದ್ದವು. ಈ ವೇಳೆ ಮೂರು ಆನೆಗಳು ಕೆಸರಿನಲ್ಲಿ ಹೂತು ಹೋಗಿದ್ದವು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಅದರ ರಕ್ಷಣೆಗೆ ಧಾವಿಸಿದ್ದಾರೆ. ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಸುಮಾರು 17 ಗಂಟೆಗಳ ಕಾಲ ಸಾಹಸಮಯ ಕಾರ್ಯಾಚರಣೆ ನಡೆಸಿದರು. ಈ ವೇಳೆ ಎರಡು ಆನೆಗಳು ಸುರಕ್ಷಿತವಾಗಿ ಕೆಸರಿನಿಂದ ಹೊರಬಂದು ಕಾಡಿನತ್ತ ಕಳುಹಿಸಲಾಗಿದೆ. ಆದರೆ, ಸುಮಾರು 25 ವರ್ಷ ಪ್ರಾಯದ ಹೆಣ್ಣಾನೆಯೊಂದು ತೀವ್ರ ಅಶಕ್ತತೆಯಿಂದಾಗಿ ಎದ್ದು ನಿಲ್ಲಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿತ್ತು. ಅಸ್ವಸ್ಥಗೊಂಡಿದ್ದ ಆನೆಗೆ ನಾಗರಹೊಳೆ ಮತ್ತು ಮಲೆ ಮಹದೇಶ್ವರ ವನ್ಯಧಾಮದ ಪಶುವೈದ್ಯರು ಸ್ಥಳದಲ್ಲೇ ಗ್ಲೂಕೋಸ್ ಮತ್ತು ತುರ್ತು ಚಿಕಿತ್ಸೆ ನೀಡಿದ್ದರು. ಜೆಸಿಬಿ ಮತ್ತು ಕ್ರೇನ್‌ಗಳ ಸಹಾಯದಿಂದ ಆನೆಯನ್ನು ಎಬ್ಬಿಸುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗಲಿಲ್ಲ. ನಿರ್ಜಲೀಕರಣ (Dehydration) ಮತ್ತು ಬಿಸಿಲಿನ ತಾಪದಿಂದ ತೀವ್ರವಾಗಿ ಬಳಲಿದ್ದ ಆನೆ, ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದೆ ಎಂದು ಅರಣ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

