ಚನ್ನಪಟ್ಟಣದ ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು ಪ್ರತ್ಯಕ್ಷ

Edited By:

Updated on: Aug 27, 2026 | 7:35 AM

ಚನ್ನಪಟ್ಟಣದ ನೇರಳೂರು ಗ್ರಾಮದ ಕಬ್ಬಿನ ತೋಟದಲ್ಲಿ ನಾಲ್ಕು ಜೀವಂತ ಚಿರತೆ ಮರಿಗಳು ಪತ್ತೆಯಾಗಿವೆ. ಕಬ್ಬು ಕಟಾವು ವೇಳೆ ಕಂಡುಬಂದ ಈ 4-5 ದಿನಗಳ ಮರಿಗಳನ್ನು ಅರಣ್ಯ ಇಲಾಖೆ ರಕ್ಷಿಸಿದೆ. ತಾಯಿ ಚಿರತೆಗಾಗಿ ಗ್ರಾಮಸ್ಥರಲ್ಲಿ ಭೀತಿ ಮನೆ ಮಾಡಿದೆ. ತಕ್ಷಣ ತಾಯಿ ಚಿರತೆಯನ್ನು ಸೆರೆಹಿಡಿಯಲು ಬೋನು ಇಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಚನ್ನಪಟ್ಟಣ, ಆ.27: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ಕಬ್ಬಿನ ತೋಟವೊಂದರಲ್ಲಿ ನಾಲ್ಕು ಜೀವಂತ ಚಿರತೆ ಮರಿಗಳು ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಗ್ರಾಮದ ನಾಗೇಶ್ ಎಂಬುವವರಿಗೆ ಸೇರಿದ ಕಬ್ಬಿನ ತೋಟದಲ್ಲಿ ಕೂಲಿ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದಾಗ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಪತ್ತೆಯಾಗಿರುವ ನಾಲ್ಕೂ ಚಿರತೆ ಮರಿಗಳು ಹುಟ್ಟಿ ಕೇವಲ 4 ರಿಂದ 5 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಬ್ಬಿನ ದಟ್ಟವಾದ ಬೆಳೆಯನ್ನು ಸುರಕ್ಷಿತ ತಾಣವೆಂದು ಭಾವಿಸಿ ತಾಯಿ ಚಿರತೆ ಇಲ್ಲಿ ಈಯ್ದಿರುವ ಶಂಕೆ ವ್ಯಕ್ತವಾಗಿದೆ. ಕಬ್ಬು ಕಟಾವು ವೇಳೆ ಮರಿಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ರೈತರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಮರಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮರಿಗಳನ್ನು ಹುಡುಕಿಕೊಂಡು ತಾಯಿ ಚಿರತೆ ಗ್ರಾಮದ ಕಡೆಗೆ ಅಥವಾ ತೋಟಕ್ಕೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ. ತಕ್ಷಣವೇ ತಾಯಿ ಚಿರತೆಯನ್ನು ಬೋನು ಇಟ್ಟು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us