ರೈತರಿಗೆ ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಹೈನುಗಾರರಿಗೆ ಯುಗಾದಿ ಬೋನಸ್
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬಂದು ಬರೀ ಮೂರು ತಿಂಗಳಷ್ಟೇ ಆಗಿದೆ. ಆದರೆ ಆಗಲೇ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಭರ್ಜರಿ ವ್ಯಾಪಾರ ವಹಿವಾಟು ಮಾಡಿ ಭರಪೂರ ಲಾಭ ಮಾಡಿದೆ. ಹೀಗಾಗಿ ಲಾಭದಲ್ಲಿ ರೈತರಿಗೆ ಯುಗಾದಿ ಹಬ್ಬದ ಗಿಫ್ಟ್ ಕೊಡೋಕೆ ಮುಂದಾಗಿದೆ. ಇಡೀ ರಾಜ್ಯದಲ್ಲೇ ಯಾವ ಹಾಲು ಒಕ್ಕೂಟ ಮಾಡದ ಹೊಸ ಘೋಷಣೆಯೊಂದನ್ನ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮಾಡಿದೆ. ಏನದು ಹೊಸ ಘೋಷಣೆ? ಈ ಸುದ್ದಿ ಓದಿ.
ಚಿಕ್ಕಬಳ್ಳಾಪುರ, ಮಾರ್ಚ್ 18: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (CHIMUL) ಇಭ್ಭಾಗವಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾಗಿದೆ. ಮೂರು ತಿಂಗಳಲ್ಲೇ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಭರಫೂರ ಲಾಭ ಮಾಡಿದೆ. ಲಾಭದಲ್ಲಿ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಹಾಲು ಉತ್ಪಾದಕರಿಗೂ ಪಾಲು ನೀಡಲು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮುಂದಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಪ್ರತಿದಿನ ಸರಿ ಸುಮಾರು 4 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಸಾವಿರಾರು ಜನ ಹೈನುಗಾರರು ಹಾಲು ಉತ್ಪಾದನೆಯಿಂದ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಯುಗಾದಿ ಹಬ್ಬದ ಉಡುಗೊರೆ ಎಂಬಂತೆ ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ 1 ರೂಪಾಯಿ ಬೋನಸ್ ನೀಡಿ, ಪ್ರತಿ ಲೀಟರ್ಗೆ 32.40 ರೂ. ನೀಡಲು ಘೋಷಣೆ ಮಾಡಿದೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಹಾಲಿನ ಉತ್ಪಾದನೆಯಲ್ಲಿ ಕುಂಠಿತ ಆಗಲಿದೆ. ಹೀಗಾಗಿ ಹೈನುಗಾರರಿಗೆ ಎದುರಾಗುವ ಅರ್ಥಿಕ ಸಂಕಷ್ಟಕ್ಕೆ ಸಾಥ್ ಕೊಡುವ ಸಲುವಾಗಿ ಮಾರ್ಚ್ 15 ರಿಂದ ಮೇ 15 ರವರೆಗೂ ನಿರಂತರವಾಗಿ 2 ತಿಂಗಳು ಅಂದರೆ, 60 ದಿನಗಳ ಕಾಲ ರೈತರು ಉತ್ಪಾದಿಸುವ ಹಾಲಿಗೆ ಪ್ರತಿ ಲೀಟರ್ಗೆ 1 ರೂಪಾಯಿ ಹೆಚ್ಚುವರಿಯಾಗಿ ಕೊಡಲು ಚಿಮುಲ್ ತೀರ್ಮಾನಿಸಿದೆ.
60 ದಿನಗಳ ಕಾಲ 1 ರೂಪಾಯಿ ಹೆಚ್ಚುವರಿಯಿಂದ ಸರಿಸುಮಾರು ಎರಡೂವರೆ ಕೋಟಿ ರೂಪಾಯಿ ಹೈನುಗಾರರ ಕೈ ಸೇರಲಿದೆ. ಚಿಮುಲ್ ಒಕ್ಕೂಟದ ಈ ನಡೆ ಹೈನುಗಾರರಿಗೆ ಸಂತಸಕ್ಕೆ ಕಾರಣವಾಗಿದೆ.