ಚಿಕ್ಕಮಗಳೂರು: ರಾಣಿ ಝರಿ ಪ್ರವಾಸಿ ತಾಣದಲ್ಲಿ ರೀಲ್ಸ್‌ಗಾಗಿ 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
Chikmagaluru News: ಚಿಕ್ಕಮಗಳೂರಿನ ರಾಣಿ ಝರಿ ಪ್ರವಾಸಿ ತಾಣದಲ್ಲಿ ರೀಲ್ಸ್‌ಗಾಗಿ ಪ್ರವಾಸಿಗರು 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿದ್ದಾರೆ. ವಾಹನ ಸಂಚಾರ ನಿಷೇಧಿತ ಪ್ರದೇಶದಲ್ಲಿ ಹುಚ್ಚಾಟ ನಡೆಸಿದ ಹಿನ್ನೆಲೆ ಅರಣ್ಯ ಇಲಾಖೆ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ.
ಚಿಕ್ಕಮಗಳೂರು, ಆಗಸ್ಟ್ 20: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಲು ಪ್ರವಾಸಿಗರು ಅಪಾಯಕಾರಿ ಸಾಹಸಕ್ಕೆ ಮುಂದಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ರಾಣಿ ಝರಿ ಪ್ರವಾಸಿ ತಾಣದಲ್ಲಿ ನಡೆದಿದೆ. ಸುಮಾರು 3,000 ಅಡಿ ಆಳದ ಪ್ರಪಾತದ ಅಂಚಿನಲ್ಲೇ ವಾಹನ ಓಡಿಸಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಣಿ ಝರಿ ವ್ಯೂ ಪಾಯಿಂಟ್‌ನಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದ್ದರೂ, ಬೆಂಗಳೂರು ಮೂಲದ ಪ್ರವಾಸಿಗರು ಥಾರ್ ಜೀಪ್ ಅನ್ನು ಕೊಂಡೊಯ್ದು ರೀಲ್ಸ್‌ಗಾಗಿ ಅಪಾಯಕಾರಿ ರೀತಿಯಲ್ಲಿ ಓಡಿಸಿದ್ದಾರೆ. ಸ್ವಲ್ಪ ನಿಯಂತ್ರಣ ತಪ್ಪಿದರೂ ಭಾರಿ ಪ್ರಪಾತಕ್ಕೆ ಬೀಳುವ ಸಾಧ್ಯತೆಯಿತ್ತು.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಕಳಸ ಅರಣ್ಯ ವಲಯದ ಸಿಬ್ಬಂದಿ, ಅರಣ್ಯ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಥಾರ್ ಜೀಪ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪ್ರಕೃತಿ ಸೌಂದರ್ಯ ಸವಿಯುವ ನೆಪದಲ್ಲಿ ಪ್ರವಾಸಿಗರು ತಮ್ಮ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ