ಧರ್ಮಸ್ಥಳ ಕೇಸ್​​: ಜಾಮೀನು ಸಿಕ್ಕರೂ ಮಾಸ್ಕ್​​ಮ್ಯಾನ್​​ ಚಿನ್ನಯ್ಯಗಿಲ್ಲ ಬಿಡುಗಡೆ ಭಾಗ್ಯ!

Updated By: ಪ್ರಸನ್ನ ಹೆಗಡೆ

Updated on: Dec 04, 2025 | 2:21 PM

ಧರ್ಮಸ್ಥಳ 'ಬುರುಡೆ' ಕೇಸ್​​ ಪ್ರಕರಣದ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ನವೆಂಬರ್ 26ರಂದು ಷರತ್ತುಬದ್ಧ ಜಾಮೀನು ದೊರೆತಿದೆ. ಆದರೆ, ಒಂದು ಲಕ್ಷ ರೂಪಾಯಿ ಭದ್ರತಾ ಬಾಂಡ್ ಮತ್ತು ಇಬ್ಬರು ಜಾಮೀನುದಾರರನ್ನು ಒದಗಿಸಲು ಸಾಧ್ಯವಾಗದ ಕಾರಣ ಆತ ಇನ್ನೂ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲೇ ಉಳಿದಿದ್ದಾನೆ. ಜಾಮೀನು ಸಿಕ್ಕರೂ ಶ್ಯೂರಿಟಿ ಇಲ್ಲದೆ ಚಿನ್ನಯ್ಯ ಜೈಲಿನಲ್ಲಿ ನರಳುತ್ತಿದ್ದಾನೆ.

ಶಿವಮೊಗ್ಗ, ಡಿಸೆಂಬರ್​​ 04: ಧರ್ಮಸ್ಥಳ ‘ಬುರುಡೆ’ ಕೇಸ್​​ ಪ್ರಕರಣದ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೋರ್ಟ್​​ ಜಾಮೀನು ನೀಡಿ ವಾರ ಕಳೆದರೂ ಬಿಡುಗಡೆ ಭಾಗ್ಯಮಾತ್ರ ಸಿಕ್ಕಿಲ್ಲ. ನವೆಂಬರ್​ 26ರಂದು ಚಿನ್ನಯ್ಯಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಆಗಿತ್ತು. ಇಬ್ಬರು ಜಾಮೀನುದಾರರು, 1 ಲಕ್ಷ ಭದ್ರತೆ ಬಾಂಡ್ ನೀಡಲು ಕೋರ್ಟ್​​ ಆದೇಶಿಸಿತ್ತು. ಆದರೆ, ಯಾರೂ ಜಾಮೀನು ಮತ್ತು ಭದ್ರತೆ ಹಣ ಠೇವಣಿ ಮಾಡದ ಹಿನ್ನೆಲೆ ಇನ್ನೂ ಶಿವಮೊಗ್ಗದ ಜೈಲಿನಲ್ಲಿಯೇ ಚಿನ್ನಯ್ಯ ಇರುವಂತಾಗಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿಸಿದ್ದ ಚಿನ್ನಯ್ಯ ಹೇಳಿದ ಸ್ಥಳಗಳಲ್ಲೆಲ್ಲಾ ಅಗೆದು ಪರೀಕ್ಷಿಸಲಾಗಿತ್ತು. ಆದರೆ ಯಾವುದೇ ಮಹತ್ವದ ಸುಳಿವು ಅಥವಾ ಆರೋಪಕ್ಕೆ ಪೂರಕವಾದ ಅಂಶಗಳು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನೇ ಪ್ರಕರಣದಲ್ಲಿ ಆರೋಪಿಯಾಗಿದ್ದ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.