ಮೈಸೂರು: ಅರಮನೆ ನಗರಿ ಮದುವಣಗಿತ್ತಿಯಂತೆ ವಿದ್ಯುತ್ ದೀಪಾಲಂಕಾರದಿಂದ ಮೀರ ಮೀರ ಮಿಂಚುತ್ತಿದೆ. ಎಲ್ಲೆ ಹೋದ್ರೂ ಕಲರ್ ಫುಲ್ ಲೈಟಿಂಗ್ಸ್‌ಗಳು ಎಲ್ಲರನ್ನೂ ಸೆಳೆಯುತ್ತಿದೆ. ಆದ್ರೆ ಇದೇ ಕೊರೊನಾ ಹೆಚ್ಚಾಗಲು ಕಾರಣವಾಗುತ್ತಾ ಅನ್ನೋ ಭಯ ಕಾಡುಲು ಶುರು ಮಾಡಿದೆ.
ಎಲ್ಲೇ ನೋಡಿದ್ರೂ ಕಾಣುವ ಝಗಮಗಿಸೋ ದೀಪಾಲಂಕಾರ. ಬೀದಿ ಬೀದಿಗಲ್ಲಿ ಫಳ ಫಳ ಹೊಳೆಯೋ ಕಲರ್ ಫುಲ್ ವಿದ್ಯುತ್ ದೀಪ.. ಮರದ ಮೇಲೆ, ಕಟ್ಟಡದ ಮೇಲೆ, ರಸ್ತೆಯ ಉದ್ದಕ್ಕೂ ಕಣ್ಣು ಕುಕ್ಕುವ ಲೈಟಿಂಗ್ಸ್. ಮಿಂಚುವ ಲೈಟ್ಸ್ ನಡುವೆ ಸೆಲ್ಫಿಗೆ ಮುಗಿ ಬಿದ್ದ ಜನ. ಇದು ಸಾಂಸ್ಕೃತಿಕ ನಗರಿ ಮೈಸೂರಿನ ಸರಳಾ ದಸರಾದ ಝಲಕ್.
ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆ ದೀಪಾಲಂಕಾರವಾಗಿದ್ದು, ನಗರದೆಲ್ಲೆಡೆ ದೀಪಾಲಂಕಾರದಿಂದ ಮೈಸೂರು ಕಂಗೊಳಿಸುತ್ತಿದೆ. ಒಂದ್ಕಡೆ ಈ ಕಲರ್ ಫುಲ್ ಲೈಟಿಂಗ್ಸ್ ಜನರನ್ನ ಸೆಳೆಯುತ್ತಿದ್ದರೆ, ಕೊರೊನಾ ಭಯ ಕೂಡ ಕಾಡುತ್ತಿದೆ. ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ಜನ ಜೀವನವನ್ನು ಅಸ್ತವ್ಯಸ್ತ ಮಾಡಿದ್ದು, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲೂ ಕೂಡ ಕೊರೊನಾ ಕೇಕೆ ಹಾಕುತ್ತಿದೆ. ಹೀಗಿರುವಾಗ ಮೈಸೂರಿನಲ್ಲಿ ಸರಳ ದಸರಾ ಹೆಸರಿನಲ್ಲಿ ಹಾಕಲಾಗಿರುವ ದೀಪಾಲಂಕಾರ ಕೊರೊನಾದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದ್ದರೂ ಅರಮನೆ ನಗರಿಯಲ್ಲಿ ಅದ್ದೂರಿಯಾಗಿ ದೀಪಾಲಂಕಾರ ಮಾಡಲಾಗಿದೆ. ಮೈಸೂರಿನ ಪ್ರಮುಖ ರಸ್ತೆಗಳು, ವೃತ್ತಗಳು ಆಕರ್ಷಕ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಇದನ್ನು ನೋಡಲು ದಸರಾದ ಮೊದಲ ದಿನವೇ ಜನಸಾಗರ ಹರಿದು ಬಂದಿದೆ. ಆದ್ರೆ ಜನರು ಸಾಮಾಜಿಕ ಅಂತರ, ಮಾಸ್ಕ್ ಮರೆತು ಲೈಟ್‌ಗಳ ಮುಂದೆ ಫೋಟೋಗೆ ಮುಗಿ ಬಿದ್ದಿದ್ದಾರೆ. ಇದು ಕೊರೊನಾ ಮತ್ತಷ್ಟು ಹೆಚ್ಚಾಗುವ ಆತಂಕ ಮನೆ ಮಾಡಿದೆ.
ಒಟ್ನಲ್ಲಿ ಕ್ರೂರಿ ಕೊರೊನಾ ಉಪಟಳದಿಂದ ಈ ಸಲ ಸಿಂಪಲ್ ದಸರಾ ಆಚರಣೆ ಮಾಡಲಾಗುತ್ತಿದೆ. ಆದ್ರೆ ಅರಮನೆ ನಗರಿಯಲ್ಲಿ ಹಾಕಿರುವ ಲೈಟಿಂಗ್ಸ್‌ನಿಂದ ಕೊರೊನಾ ಹೆಚ್ಚಾಗುವ ಆತಂಕ ಮನೆ ಮಾಡಿದೆ. ಹೀಗಾಗಿ ಜನ ಆದಷ್ಟು ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಅಂತರ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ಹಾಗೇ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Published On - 7:07 am, Sun, 18 October 20