Cristiano Ronaldo: ಬರೋಬ್ಬರಿ 900 ಗೋಲು..! ಫುಟ್ಬಾಲ್ ಲೋಕದಲ್ಲಿ ಇತಿಹಾಸ ನಿರ್ಮಿಸಿದ ಕಾಲ್ಚೆಂಡಿನ ಚತುರ ರೊನಾಲ್ಡೊ
Cristiano Ronaldo: ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಲೋಕದಲ್ಲಿ ಇದುವರೆಗೂ ಯಾವ ಆಟಗಾರನೂ ಮಾಡಲಾಗದ ಸಾಧನೆಯೊಂದನ್ನು ಮಾಡಿದ್ದಾರೆ. ತನ್ನ ವೃತ್ತಿಜೀವನದ 900ನೇ ಗೋಲು ಬಾರಿಸುವ ಮೂಲಕ ರೊನಾಲ್ಡೊ, ಫುಟ್ಬಾಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಲೋಕದಲ್ಲಿ ಇದುವರೆಗೂ ಯಾವ ಆಟಗಾರನೂ ಮಾಡಲಾಗದ ಸಾಧನೆಯೊಂದನ್ನು ಮಾಡಿದ್ದಾರೆ. ತನ್ನ ವೃತ್ತಿಜೀವನದ 900ನೇ ಗೋಲು ಬಾರಿಸುವ ಮೂಲಕ ರೊನಾಲ್ಡೊ, ಫುಟ್ಬಾಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಾಸ್ತವವಾಗಿ ನೇಷನ್ ಲೀಗ್ನಲ್ಲಿ ನಡೆದ ಪೋರ್ಚುಗಲ್ ಮತ್ತು ಕ್ರೊಯೇಷಿಯಾ ನಡುವಿನ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು ಪ್ರತಿನಿಧಿಸಿದ ರೊನಾಲ್ಡೊ, ಪಂದ್ಯದ 34 ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಫುಟ್ಬಾಲ್ ಇತಿಹಾಸದಲ್ಲಿ ಈ ಹೊಸ ದಾಖಲೆಯನ್ನೂ ನಿರ್ಮಿಸಿದರು.
ಈ ಏಕೈಕ ಗೋಲಿನೊಂದಿಗೆ ರೊನಾಲ್ಡ್, ಕ್ಲಬ್ ಮತ್ತು ದೇಶದ ಪರ ಆಡುವುದನ್ನು ಸೇರಿದಂತೆ ತಮ್ಮ ವೃತ್ತಿಜೀವನದ 900 ಗೋಲುಗಳನ್ನು ಪೂರ್ಣಗೊಳಿಸಿದರು. ಇನ್ನು ಕ್ಲಬ್ ಹೊರತಾಗಿ ರೊನಾಲ್ಡೊ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ 131 ಗೋಲು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. 2002 ರಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ರೊನಾಲ್ಡೊ ಅಂದಿನಿಂದ, ರಿಯಲ್ ಮ್ಯಾಡ್ರಿಡ್ ಪರ 458 ಗೋಲು, ಮ್ಯಾಂಚೆಸ್ಟರ್ ಯುನೈಟೆಡ್ ಪರ 145 ಗೋಲು, ಜುವೆಂಟಸ್ ಪರ 101 ಗೋಲುಗಳನ್ನು ಮತ್ತು ಎಎಸ್ ನಾಸರ್ ಪರ 68 ಗೋಲುಗಳನ್ನು ಬಾರಿಸಿದ್ದಾರೆ. ಇದಲ್ಲದೆ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸ್ಪೋರ್ಟಿಂಗ್ ಲಿಸ್ಬನ್ ಪರ 5 ಗೋಲುಗಳನ್ನು ಗಳಿಸಿದ್ದಾರೆ.