ಮತ್ತೊಮ್ಮೆ ಸಭೆ ಸೇರಿದ ದಲಿತ ಸಚಿವರು, ತಿಂಡಿ ತಿನ್ನಲು ಸೇರಿದ್ದು ಎಂದ ಸಚಿವ ಜಾರಕಿಹೊಳಿ

|

Updated on: Feb 08, 2024 | 3:08 PM

ಸತೀಶ್ ಜಾರಕಿಹೊಳಿ, ಮುನಿಯಪ್ಪ ಮತ್ತು ಮಹಾದೇವಪ್ಪ ಜೊತೆ ಸೇರಿದಾಗ ಏನಾದರೂ ಒಂದು ವಿಶೇಷ ಇರುತ್ತದೆ, ಈ ಬಾರಿಯ ವಿಶೇಷತೆ ಏನು ಅಂತ ಕೇಳಿದಾಗ ಕೋಲಾರ ತಿಂಡಿ ಬಿಟ್ಟರೆ ಮತ್ತೇನೂ ವಿಶೇಷವಿಲ್ಲ ಎಂದು ಜಾರಕಿಹೊಳಿ ಹೇಳಿದರು. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಹೇಳಿದರು.

ಬೆಂಗಳೂರು: ರಾಜ್ಯ ಸರ್ಕಾರದ ದಲಿತ ಮಂತ್ರಿಗಳು (Dalit ministers) ಯಾವುದೋ ಒಂದು ವಿಷಯವನ್ನು ಚರ್ಚಿಸುತ್ತಿರುವಂತಿದೆ. ಅವರೆಲ್ಲ ಒಂದುಗೂಡಿ ಸತೀಶ್ ಜಾರಕಿಹೊಳಿ (Satish Jarkiholi) ನೇತೃತ್ವದಲ್ಲಿ ಗುಪ್ತ್ ಗುಪ್ತ್ ಸಭೆಗಳನ್ನು ನಡೆಸುತ್ತಿರುವುದು ಬಹಿರಂಗಗೊಂಡಿದೆ. ಹಿಂದೊಮ್ಮೆ ಬೆಳಗಾವಿಯಲ್ಲಿ ದಲಿತ ಮುಖಂಡರ ಸಭೆ ನಡೆದಿತ್ತು ಇವತ್ತು ಕೋಲಾರ ಮೂಲದವರಾದ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ನಿವಾಸದಲ್ಲಿ ಸಭೆ ನಡೆದಿದೆ. ಸತೀಶ್ ಮತ್ತು ಮುನಿಯಪ್ಪ ಅವರಲ್ಲದೆ ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್ ಸಿ ಮಹದೇವಪ್ಪ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸತೀಶ್ ಜಾರಕಿಹೊಳಿ, ಸಭೆಯ ಅಜೆಂಡಾ ಏನೂ ಇರಲಿಲ್ಲ, ಕಳೆದಬಾರಿ ಬೆಳಗಾವಿ ತಿಂಡಿಯನ್ನು ಸವಿದಿದ್ದೆವು ಈ ಬಾರಿ ಬದಲಾವಣೆಗೋಸ್ಕರ ಕೋಲಾರ ತಿಂಡಿ ತಿನ್ನುವ ಅಂತ ಸೇರಿದ್ದೆವು ಅಂತ ನಗುತ್ತಾ ಹೇಳಿದರು. ಸತೀಶ್ ಜಾರಕಿಹೊಳಿ, ಮುನಿಯಪ್ಪ ಮತ್ತು ಮಹಾದೇವಪ್ಪ ಜೊತೆ ಸೇರಿದಾಗ ಏನಾದರೂ ಒಂದು ವಿಶೇಷ ಇರುತ್ತದೆ, ಈ ಬಾರಿಯ ವಿಶೇಷತೆ ಏನು ಅಂತ ಕೇಳಿದಾಗ ಕೋಲಾರ ತಿಂಡಿ ಬಿಟ್ಟರೆ ಮತ್ತೇನೂ ವಿಶೇಷವಿಲ್ಲ ಎಂದು ಜಾರಕಿಹೊಳಿ ಹೇಳಿದರು. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು, ಹೈ ಕಮಾಂಡ್ ತೀರ್ಮಾನದ ಮೇರೆಗೆ ಅದು ನಡೆಯಲಿದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ