ದಸರಾ ಪರೇಡ್ನಲ್ಲಿ ಪ್ರೋಟೋಕಾಲ್ ಉಲ್ಲಂಘನೆ ಆರೋಪ: ಸಚಿವ ಮಹದೇವಪ್ಪ ಹೇಳಿದ್ದೇನು ನೋಡಿ
ಮೈಸೂರು ದಸರಾ ಕೊನೆಯ ದಿನದ ಪರೇಡ್ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರ ಜತೆ ಪರೇಡ್ನಲ್ಲಿ ಸಚಿವ ಮಹದೇವಪ್ಪ ಅವರ ಮೊಮ್ಮಗ ಇದ್ದ ವಿಚಾರ ವಿವಾದಕ್ಕೀಡಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರೊಟೋಕಾಲ್ ಉಲ್ಲಂಘನೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಚಿವ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ. ಅವರ ಮಾತುಗಳ ವಿಡಿಯೋ ಇಲ್ಲಿದೆ.
ಮೈಸೂರು, ಅಕ್ಟೋಬರ್ 4: ಸಚಿವ ಹೆಚ್ಸಿ ಮಹದೇವಪ್ಪ ಅವರು ದಸರಾ ಆಚರಣೆಯ ಸಂದರ್ಭದಲ್ಲಿ ತಮ್ಮ ಮೊಮ್ಮಗ ಕಾಣಿಸಿಕೊಂಡ ವಿಚಾರವಾಗಿ ಪ್ರೋಟೋಕಾಲ್ ಉಲ್ಲಂಘನೆಯ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರೇಡ್ ವೇಳೆ ಮಹದೇವಪ್ಪ ಅವರ ಮೊಮ್ಮಗ ಕಾಣಿಸಿಕೊಂಡಿದ್ದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿಗಳು ದಸರಾ ದಿನ ಉದ್ಘಾಟಕರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದು ಸರ್ಕಾರಿ ಕಾರ್ಯಕ್ರಮ. ಆದರೆ, ಅದಾದ ನಂತರದ ದಸರಾ 11ನೇ ದಿನದ ಆಚರಣೆಯು ಪೆರೇಡ್ ಆಗಿರಲಿಲ್ಲ ಮತ್ತು ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲಿ ಪ್ರೋಟೋಕಾಲ್ ಇರಲಿಲ್ಲ, ಸಲ್ಯೂಟ್ ಸ್ವೀಕರಿಸುವ ಪ್ರಶ್ನೆಯೇ ಇರಲಿಲ್ಲ. ಜನಸಮೂಹಕ್ಕೆ ಕೈಬೀಸಿ ಕೃತಜ್ಞತೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋಗಿದ್ದರು. ದಸರಾ ಆಚರಣೆಯ ಬಗ್ಗೆ ಅರಿವಿಲ್ಲದವರು ಈ ರೀತಿ ಸುದ್ದಿ ಹಬ್ಬಿಸುತ್ತಾರೆ ಎಂದು ಮಹದೇವಪ್ಪ ಹೇಳಿದರು. ಮೊಮ್ಮಗನ ಉಪಸ್ಥಿತಿಯಿಂದ ಯಾವುದೇ ಪ್ರೋಟೋಕಾಲ್ ಉಲ್ಲಂಘನೆಯಾಗಿಲ್ಲ ಮತ್ತು ಆಗಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.
