ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ: ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ

Edited By:

Updated on: Mar 04, 2026 | 4:20 PM

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಹೈರಾಣಾಗಿದ್ದಾರೆ. 112 ಸಹಾಯವಾಣಿಗೆ ಬಂದ ಕರೆ ಬೆನ್ನಲ್ಲೇ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದಿಂದ ನಿವಾಸದ ಕೂಲಂಕಷ ಪರಿಶೀಲನೆ ನಡೆದಿದೆ. ಒಂದು ತಿಂಗಳ ಹಿಂದೆ ಡಿಸಿ ಕಚೇರಿಗೂ ಇದೇ ರೀತಿ ಬೆದರಿಕೆ ಬಂದಿತ್ತು. ಪೊಲೀಸರು ಕರೆ ಮಾಡಿದವರ ಸುಳಿವು ಪತ್ತೆಗೆ ತನಿಖೆ ಮುಂದುವರಿಸಿದ್ದು, ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.

ದಾವಣಗೆರೆ, ಮಾ.4: ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಬಂದ ಕೇವಲ ಒಂದು ತಿಂಗಳ ಅಂತರದಲ್ಲಿ, ಈಗ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸಕ್ಕೂ ಬಾಂಬ್ ಬೆದರಿಕೆ ಬಂದಿರುವುದು ಪೊಲೀಸರನ್ನು ಹೈರಾಣಾಗಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಜಿಲ್ಲಾಧಿಕಾರಿಗಳ ಮನೆಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಪೊಲೀಸ್ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರು, ದಾವಣಗೆರೆ ನಗರದ ರಿಂಗ್ ರೋಡ್‌ನಲ್ಲಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶ್ವಾನ ದಳ (Dog Squad) ಮತ್ತು ಬಾಂಬ್ ನಿಷ್ಕ್ರಿಯ ದಳ (Bomb Disposal Squad), ನಿವಾಸದ ಮೂಲೆ ಮೂಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿವೆ. ಸುಮಾರು ಒಂದು ತಿಂಗಳ ಹಿಂದೆ ಇದೇ ರೀತಿ ಜಿಲ್ಲಾಧಿಕಾರಿಗಳ ಕಚೇರಿಗೂ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದೀಗ ನೇರವಾಗಿ ಅವರ ಮನೆಗೇ ಬೆದರಿಕೆ ಬಂದಿರುವುದು ಗಂಭೀರ ವಿಷಯವಾಗಿ ಪರಿಣಮಿಸಿದೆ. ದಾವಣಗೆರೆ ನಗರ ಪೊಲೀಸರು ಈಗಾಗಲೇ ತಾಂತ್ರಿಕ ತಂಡದ ನೆರವಿನೊಂದಿಗೆ 112 ಕ್ಕೆ ಕರೆ ಮಾಡಿದ ವ್ಯಕ್ತಿಯ ಲೋಕೇಶನ್ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇದೊಂದು ಹುಸಿ ಬಾಂಬ್ ಕರೆಯೇ ಅಥವಾ ಗಂಭೀರ ಸಂಚೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More