ನನ್ನ ಲೈಫ್​​​​ ಹೇಗಾಗಿದೆ ಅಂದ್ರೆ: ಒಂದು ಕಡೆ ಅಪ್ಪ ಇಲ್ಲ, ಇನ್ನೊಂದು ಕಡೆ ಅಮ್ಮನಿಗೆ ಅನಾರೋಗ್ಯ, ಕೈಯಲ್ಲಿ ಕೆಲಸ ಇಲ್ಲ

Updated on: Feb 24, 2026 | 7:53 PM

ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಉದ್ಯೋಗಾಕಾಂಕ್ಷಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ತಮ್ಮ ಭರವಸೆಗಳನ್ನು ಈಡೇರಿಸಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ವೈಯಕ್ತಿಕ ಕಷ್ಟಗಳನ್ನು ವಿವರಿಸಿದ್ದಾರೆ.

ಧಾರವಾಡ, ಫೆ.24: ಸರ್ಕಾರಿ ಹುದ್ದೆಗಳ ಭರ್ತಿಗಾಗಿ ನಿರುದ್ಯೋಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಶ್ರೀನಗರ ವೃತ್ತದಿಂದ ಜುಬಿಲಿ ವೃತ್ತದವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ದೊರೆತಿದ್ದು, ವಿದ್ಯಾರ್ಥಿಗಳ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬರು ತಮ್ಮ ನೋವನ್ನು ಹಂಚಿಕೊಳ್ಳುತ್ತಾ, “ನಾನು ಕಳೆದ ಮೂರು ವರ್ಷಗಳಿಂದ ಓದಲು ಬಂದಿದ್ದೇನೆ. ನನ್ನ ತಂದೆ ಇಲ್ಲ. ನನ್ನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ದೊಡ್ಡ ಮಗನಾಗಿ ನಾನು ಸಾಲ ಮಾಡಿ ಓದುತ್ತಿದ್ದೇನೆ. ನಾವು ಬೆಳಿಗ್ಗೆ ಟಿಫಿನ್ ಮಾಡಿದರೆ ರಾತ್ರಿ ಊಟ ಮಾಡಲು ಕಷ್ಟಪಡುವ ಪರಿಸ್ಥಿತಿ ಇದೆ” ಎಂದು ಕಣ್ಣೀರು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರಸ್ತಾಪಿಸಿದ ವಿದ್ಯಾರ್ಥಿ, “ಸಿದ್ದರಾಮಯ್ಯನವರು ತಮ್ಮ ಮೊಮ್ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ರಾಜಕೀಯ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಾರೆ. ನಮ್ಮಂತಹ ಬಡ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವವರು ಯಾರು?” ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನಿರುದ್ಯೋಗಿಗಳಿಗೆ ನೀಡಿರುವ ನುಡಿದಂತೆ ನಡೆ ಭರವಸೆಯ 3,000 ರೂಪಾಯಿ ಆರ್ಥಿಕ ನೆರವು ಬೇಕಾಗಿಲ್ಲ, ಬದಲಾಗಿ ಉದ್ಯೋಗ ಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಅಹಿಂದ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಈ ವರ್ಗದ ಜನರಿಗೇ ಸರ್ಕಾರಿ ಉದ್ಯೋಗಗಳ ಅತಿ ಹೆಚ್ಚು ಅಗತ್ಯವಿದೆ. ಅವರಿಗೆ ಉದ್ಯೋಗ ನೀಡಲು ಸರ್ಕಾರ ಏಕೆ ವಿಫಲವಾಗಿದೆ ಎಂದು ಕೇಳಿದ್ದಾರೆ. 2019ರಲ್ಲಿ ನಡೆದ ಕೆಪಿಎಸ್‌ಸಿ ಎಸ್‌ಡಿಎ ಮತ್ತು ಎಫ್‌ಡಿಎ ಪರೀಕ್ಷೆಗಳ ನೇಮಕಾತಿಯ ಬಗ್ಗೆಯೂ ಇನ್ನೂ ಸ್ಪಷ್ಟತೆ ಇಲ್ಲ ಎಂದು ದೂರಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳಿದ್ದರೂ, ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ. ಸುಮಾರು 2,20,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಸರ್ಕಾರ ಜನತೆಗೆ ದ್ರೋಹ ಮಾಡುತ್ತಿದೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಭ್ರಷ್ಟತೆಯ ಹೆಸರನ್ನು ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ದುಡ್ಡಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ, ಮಕ್ಕಳ ಬಾಳಲ್ಲಿ ಆಟವಾಡಬೇಡಿ” ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More